ಚಿಕ್ಕಮಗಳೂರು : ಬಿಜೆಪಿ (BJP) ನಾಯಕ ಸಿ.ಟಿ. ರವಿ(C.T. Ravi) ಹೆಸರಿನಲ್ಲಿ ಸುಳ್ಳು ಪೋಸ್ಟ್ ಹಾಕಿದ್ದ ದಾವಣಗೆರೆ ಹಾಗೂ ತುಮಕೂರು ಮೂಲದ ಮೂವರ ವಿರುದ್ಧ ದೂರು ದಾಖಲಾಗಿದೆ.
ಜಿಲ್ಲೆಯ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ ದೂರು ದಾಖಲಿಸಿದ್ದು, ದಾವಣಗೆರೆಯ ಹರೀಶ್ ಕೆಂಗನಹಳ್ಳಿ, ಗುರುಪಾಟೀಲ್ ಹಾಗೂ ತುಮಕೂರು ಮೂಲದ ಸುವರ್ಣಗಿರಿ ಕುಮಾರ್ ಎಂಬ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಲಿಂಗಾಯಿತ ಸಮುದಾಯ ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ಸಮುದಾಯದ ನಾಯಕರಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ (B.S Yediyurappa) ತಂಡ ಕೂಡ ಹೈಕಮಾಂಡ್ ಹೇಳಿದಂತೆ ನಡೆಯಬೇಕು. ಟಿಕೆಟ್ ವಿಚಾರದಲ್ಲಿಯೂ ಯಡಿಯೂರಪ್ಪನವರ ವಿರುದ್ಧ ಸಿ.ಟಿ ರವಿ ಮಾತನಾಡಿದ್ದಾರೆಂದು ಪತ್ರಿಕೆಯಲ್ಲಿ ಪ್ರಕಟವಾದಂತೆ ಮುದ್ರಿಸಿ ಸಾಮಾಜಿಕ ಜಾಲತಾಣದಲ್ಲಿ ಬಿಡಲಾಗಿತ್ತು.
ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಬೀಸಿತ್ತು. ಆದರೆ, ಈ ಕುರಿತು ಮಾತನಾಡಿದ್ದ ಸಿ.ಟಿ. ರವಿ, ನನಗೆ ವಿವೇಚನೆ ಇದೆ. ನಾನು ಈ ರೀತಿಯ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದರು.








