ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅವರು ತಮ್ಮ ಬಂಧನದ ಸಂದರ್ಭದಲ್ಲಿ ಪೊಲೀಸ್ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ. 13 ಪುಟಗಳ ದೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಚನ್ನರಾಜ ಹಟ್ಟಿಹೊಳಿ, ಬಸವನಗೌಡ ಬಾದರ್ಲಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಅವರ ಪಿಎಗಳು ಹಾಗೂ ಹಿರೇಬಾಗೇವಾಡಿ ಸಿಪಿಐ ರಾಜು ಪಾಟೀಲ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಪೊಲೀಸ್ ದೌರ್ಜನ್ಯ ಮತ್ತು ಕಾನೂನು ಬಾಹೀರ ಬಂಧನ
ಸಿ.ಟಿ. ರವಿ ಅವರು ತಮ್ಮ ದೂರಿನಲ್ಲಿ ಕಾನೂನು ಬಾಹಿರ ಬಂಧನ, ಕಿಡ್ನಾಪ್, ನಕಲಿ FIR, ಕಸ್ಟಡಿಯಲ್ಲಿ ಟಾರ್ಚರ್ ನೀಡಿದ ಬಗ್ಗೆ ಉಲ್ಲೇಖಿಸಿದ್ದಾರೆ. ತಮ್ಮ ತಲೆಗೆ ರಕ್ತ ಬಂದಿರುವ ವಿಚಾರ ಕೂಡ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯಪಾಲರಿಗೆ ಮತ್ತು ಡಿಜಿಪಿಗೆ ದೂರು
ಸಿ.ಟಿ. ರವಿ ಅವರು ರಾಜ್ಯಪಾಲರಿಗೆ, ಡಿಜಿಪಿ ಅಲೋಕ್ ಮೋಹನ್ ಅವರಿಗೆ ದೂರು ನೀಡಿದ್ದು, ತಾವು ಕೊಟ್ಟ ಕೇಸ್ FIR ಆಗಿಲ್ಲ ಎಂದು ಕಿಡಿಕಾರಿದ್ದಾರೆ. ಡಿಸೆಂಬರ್ 19ರಂದು ಬೆಳಗಾವಿಯಲ್ಲಿ ಬಂಧಿಸಿ ರಾತ್ರಿಯಿಡೀ ಸುತ್ತಾಡಿಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದರು.
ಸಭಾಪತಿಗಳಿಗೆ ಪತ್ರ
ಸಿಐಡಿ, ದಾಖಲೆಗಳನ್ನು ಸಂಗ್ರಹಿಸುತ್ತಿದ್ದು, ಸಿಟಿ ರವಿಗೂ ನೋಟಿಸ್ ಕೊಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಿಐಡಿಗೆ ಅತಿದೊಡ್ಡ ಸವಾಲ್ ಅಂದರೆ ಪರಿಷತ್ನಲ್ಲಿ ಮಹಜರು ನಡೆಸುವುದು. ಈ ಸಂಬಂಧ ಈಗಾಗಲೇ ಸಭಾಪತಿಗಳಿಗೆ ಪತ್ರ ಬರೆದು ಮಹಜರಿಗೆ ಅನುಮತಿ ಕೇಳಿದ್ದಾರೆ.
ಭದ್ರತೆಗೆ ಮನವಿ
ತಮಗೆ ಅಪಾಯವಿದ್ದು, ಕೇಂದ್ರೀಯ ಸಶಸ್ತ್ರ ಭದ್ರತೆಯನ್ನ ಒದಗಿಸುವಂತೆ ದೂರಿನಲ್ಲಿ ಸಿಟಿ ರವಿ ಮನವಿ ಮಾಡಿದ್ದಾರೆ. ಪ್ರತಿಯೊಬ್ಬ ಅಪರಾಧಿಗೂ ಶಿಕ್ಷೆ ಆಗಬೇಕು ಮತ್ತು ಪೊಲೀಸ್ ಇಲಾಖೆಯಲ್ಲಿ ಶಿಸ್ತು ಮೂಡುವಂತಾಗಬೇಕು ಎಂದು ಅವರು ಮನವಿ ಮಾಡಿದ್ದಾರೆ.