ಬೆಂಗಳೂರು:ಸ್ವಂತ ಸೂರು ಹೊಂದಿರುವ ಬಡವರ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಿ, ಎಪಿಎಲ್ ಕಾರ್ಡ್‌ಗೆ ಪರಿವರ್ತಿಸುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರದ ವಿರುದ್ಧ ಕೇಂದ್ರ ಸಚಿವ ವಿ. ಸೋಮಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇದು ಬಡವರ ಹೊಟ್ಟೆಗೆ ಹೊಡೆಯುವ ‘ಪಾಪದ ಕೆಲಸ’ ಎಂದು ಗುಡುಗಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ಈ ಅವೈಜ್ಞಾನಿಕ ಚಿಂತನೆಯನ್ನು ಕಟು ಶಬ್ದಗಳಲ್ಲಿ ಟೀಕಿಸಿದರು. “ಇಲ್ಲಿಯವರೆಗೂ ನೀವೆಲ್ಲಾ ಕತ್ತೆ ಕಾಯುತ್ತಿದ್ರಾ? ಬಡವರಿಗೆ ಸೂರು ನೀಡುವುದೇ ತಪ್ಪೇ? ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ನಿಮಗೆ ಯಾರು ಅಧಿಕಾರ ಕೊಟ್ಟಿದ್ದು?” ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.
ಮೋದಿ ಬಡವರ ಪರ, ನೀವು ಬಡವರ ವಿರೋಧಿ
ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಗಳನ್ನು ಶ್ಲಾಘಿಸಿದ ಸೋಮಣ್ಣ, “ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ಐದು ವರ್ಷಗಳ ಕಾಲ ದೇಶದಾದ್ಯಂತ ಬಡವರಿಗೆ ಉಚಿತ ಪಡಿತರ (ಪಿಡಿಎಸ್) ಮುಂದುವರಿಸುವುದಾಗಿ ಘೋಷಿಸಿದ್ದಾರೆ. ಬಡವರ ಕಲ್ಯಾಣವೇ ಅವರ ಗುರಿ. ಕೇಂದ್ರ ಸರ್ಕಾರವು ಮನೆ ಇರುವವರಿಗೆ ಒಂದು ರೀತಿ, ಇಲ್ಲದವರಿಗೆ ಇನ್ನೊಂದು ರೀತಿ ಎಂದು ಯಾವುದೇ ತಾರತಮ್ಯ ಮಾಡಿಲ್ಲ. ನಾವು ನಮ್ಮ ನಿಬಂಧನೆಗಳನ್ನು ಈಗಾಗಲೇ ಸ್ಪಷ್ಟಪಡಿಸಿದ್ದೇವೆ,” ಎಂದರು.
ಗ್ಯಾರಂಟಿ ವೈಫಲ್ಯ ಮುಚ್ಚಿಕೊಳ್ಳಲು ಈ ಹುನ್ನಾರ
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವೈಫಲ್ಯವನ್ನು ಮುಚ್ಚಿಕೊಳ್ಳಲು ಇಂತಹ ಬಡವರ ವಿರೋಧಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಸೋಮಣ್ಣ ಆರೋಪಿಸಿದರು. “ಚುನಾವಣೆಗೂ ಮುನ್ನ ಈ ಕಾಂಗ್ರೆಸ್‌ನವರು ಚಂದ್ರಲೋಕ, ಇಂದ್ರಲೋಕವನ್ನೇ ಭೂಮಿಗೆ ತರುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಮೇಲೆ ಯಾವುದನ್ನೂ ಸರಿಯಾಗಿ ಜಾರಿಗೊಳಿಸಲು ಆಗಿಲ್ಲ. ಆರ್ಥಿಕ ಹೊರೆ ತಾಳಲಾರದೆ, ಈಗ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡುವ ಪಾಪದ ಕೆಲಸಕ್ಕೆ ಕೈ ಹಾಕಿದ್ದಾರೆ,” ಎಂದು ವಾಗ್ದಾಳಿ ನಡೆಸಿದರು.
ಆಹಾರ ಸಚಿವರ ಮೇಲೆ ನೇರ ವಾಗ್ದಾಳಿ
ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಅವರ ವಿರುದ್ಧವೂ ಹರಿಹಾಯ್ದ ಸೋಮಣ್ಣ, “ಆಹಾರ ಸಚಿವ ಮುನಿಯಪ್ಪ ಅವರಿಗೆ ಏನೂ ಗೊತ್ತಿಲ್ಲ. ನಿಮ್ಮ ವೈಫಲ್ಯಗಳನ್ನು ಮರೆಮಾಚಲು ಕೇಂದ್ರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಬೇಡಿ. ಏನು ಇಲ್ಲದೆ ಬರೀ ಬೆತ್ತಲೆ ಆಗಿದ್ದೀರಾ? ನಿಮ್ಮ ಈ ಪಾಪದ ಕೃತ್ಯಕ್ಕೆ ನೀವೇ ಹೊಣೆಗಾರರು, ಇದಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ,” ಎಂದು ಖಡಕ್ ಎಚ್ಚರಿಕೆ ನೀಡಿದರು.
ಈ ನಿರ್ಧಾರದಿಂದಾಗಿ ಸಣ್ಣದೊಂದು ಸೂರು ಹೊಂದಿರುವ, ಆದರೆ ದಿನನಿತ್ಯದ ಬದುಕಿಗಾಗಿ ಕಷ್ಟಪಡುವ ಲಕ್ಷಾಂತರ ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳಿಂದ ವಂಚಿತರಾಗುವ ಆತಂಕ ಎದುರಾಗಿದೆ. ಸೋಮಣ್ಣ ಅವರ ಈ ಹೇಳಿಕೆಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವಿನ ಸಂಘರ್ಷಕ್ಕೆ ಮತ್ತೊಂದು ಆಯಾಮ ನೀಡಿದ್ದು, ಬಿಪಿಎಲ್ ಕಾರ್ಡ್ ಪರಿಷ್ಕರಣೆ ವಿಚಾರ ಇದೀಗ ತೀವ್ರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.








