ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ನ್ಯೂಜಿ಼ಲೆಂಡ್ ಮಹತ್ವದ ಟೂರ್ನಿಯಲ್ಲಿ ಅದ್ಭುತ ಆರಂಭ ಕಂಡಿದೆ.
ಅಹ್ಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ 283 ರನ್‌ಗಳ ಟಾರ್ಗೆಟ್ ಚೇಸ್ ಮಾಡಿದ ಕಿವೀಸ್, 36.2 ಓವರ್‌ಗಳಲ್ಲೇ ಈ ಗುರಿ ತಲುಪುವ ಮೂಲಕ ಜಯದ ನಗೆಬೀರಿತು. ಡೆವೋನ್ ಕಾನ್ವೆ ಹಾಗೂ ರಚಿನ್ ರವೀಂದ್ರ ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ನ್ಯೂಜಿ಼ಲೆಂಡ್ ತಂಡದ ಗೆಲುವಿಗೆ ಪ್ರಮುಖ ಕಾರಣವಾಯಿತು.
ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ ಡೆವೋನ್ ಕಾನ್ವೆ(152* ರನ್, 121 ಬಾಲ್, 19 ಬೌಂಡರಿ, 3 ಸಿಕ್ಸ್) ಹಾಗೂ ರಚಿನ್ ರವೀಂದ್ರ(123* ರನ್, 96 ಬಾಲ್, 11 ಬೌಂಡರಿ, 5 ಸಿಕ್ಸ್) ಹಲವು ದಾಖಲೆಗಳನ್ನ ಬ್ರೇಕ್ ಮಾಡಿದ್ದಾರೆ. 2ನೇ ವಿಕೆಟ್‌ಗೆ 273* ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ಏಕದಿನ ವಿಶ್ವಕಪ್‌ನಲ್ಲಿ ಅತ್ಯಧಿಕ ರನ್‌ಗಳ ಜೊತೆಯಾಟದ ದಾಖಲೆ ಬರೆದಿದ್ದಾರೆ. ಇನ್ನೂ ವೈಯಕ್ತಿಕ 152* ರನ್‌ಗಳಿಸಿದ ಡೆವೋನ್ ಕಾನ್ವೆ, ಏಕದಿನ ಕ್ರಿಕೆಟ್‌ನಲ್ಲಿ ಚೇಸಿಂಗ್‌ನಲ್ಲಿ ಕಲೆಹಾಕಿದ 2ನೇ ಗರಿಷ್ಠ ಸ್ಕೋರ್ ಆಗಿದೆ.
ಅಲ್ಲದೇ ಕಾನ್ವೇ ಹಾಗೂ ರಚಿನ್ ಅವರ 273* ರನ್‌ಗಳ ಜೊತೆಯಾಟ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ನ್ಯೂಜಿ಼ಲೆಂಡ್ ಪರ ದಾಖಲಾದ 2ನೇ ಗರಿಷ್ಠ ರನ್‌ಗಳ ಜೊತೆಯಾಟವಾಗಿದೆ. ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿರುವ ಈ ಇಬ್ಬರು ಬ್ಯಾಟರ್‌ಗಳು ಟೂರ್ನಿಯ ಮುಂದಿನ ಪಂದ್ಯಗಳಲ್ಲೂ ಅಬ್ಬರದ ಪ್ರದರ್ಶನ ನೀಡುವ ದೊಡ್ಡ ನಿರೀಕ್ಷೆ ಮೂಡಿಸಿದ್ದಾರೆ.