ಐಸಿಸಿ ಏಕದಿನ ವಿಶ್ವಕಪ್-2023 ಟೂರ್ನಿಯ ಎರಡನೇ ಪಂದ್ಯದಲ್ಲಿ ಇಂದು ಪಾಕಿಸ್ತಾನ ಹಾಗೂ ನೆದರ್ಲೆಂಡ್ಸ್ ತಂಡಗಳು ಮುಖಾಮುಖಿ ಆಗುತ್ತಿದ್ದು, ಗೆಲುವಿನ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿಯಲು ಉಭಯ ತಂಡಗಳು ಸಜ್ಜಾಗಿವೆ.
ಹೈದ್ರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯುತ್ತಿದ್ದು, ಎರಡು ತಂಡಗಳು ಕಠಿಣ ಅಭ್ಯಾಸ ನಡೆಸಿವೆ. ಮೇಲ್ನೋಟಕ್ಕೆ ಇಂದಿನ ಪಂದ್ಯದಲ್ಲಿ ಪಾಕಿಸ್ತಾನ ಗೆಲ್ಲುವ ಫೇವರೆಟ್ ತಂಡವಾಗಿದ್ದರು, ಕ್ರಿಕೆಟ್ ಅಂಗಳದಲ್ಲಿ ಯಾವುದೇ ತಂಡಕ್ಕೂ ಟಕ್ಕರ್ ಕೊಡುವ ಸಾಮರ್ಥ್ಯ ನೆದರ್ಲೆಂಡ್ಸ್ ತಂಡಕ್ಕಿದ್ದು, ಅಷ್ಟು ಸುಲಭವಾಗಿ ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಹೈದ್ರಾಬಾದ್ ಅಂಗಳದಲ್ಲಿ ಎರಡು ತಂಡಗಳು ಪ್ರಬಲ ಪೈಪೋಟಿ ನಡೆಸುವ ನಿರೀಕ್ಷೆ ಇದೆ.
ಏಳು ವರ್ಷಗಳ ಬಳಿಕ ಭಾರತಕ್ಕೆ ಆಗಮಿಸಿರುವ ಪಾಕಿಸ್ತಾನ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅತ್ಯಂತ ಬಲಿಷ್ಠವಾಗಿದೆ. ಏಷ್ಯಾಕಪ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ಪಾಕಿಸ್ತಾನ, ವಿಶ್ವಕಪ್‌ನ ಎರಡು ಅಭ್ಯಾಸ ಪಂದ್ಯಗಳಲ್ಲೂ ಸಹ ಸೋಲಿನ ಆಘಾತ ಕಂಡಿದೆ. ಇದು ಸಹಜವಾಗಿಯೇ ಪಾಕ್ ತಂಡದ ಆತ್ಮವಿಶ್ವಾಸವನ್ನ ಕುಗ್ಗಿಸಿದೆ. ಹೀಗಾಗಿ ನೆದರ್ಲೆಂಡ್ಸ್ ವಿರುದ್ಧದ ಇಂದಿನ ಪಂದ್ಯವನ್ನ ಗೆದ್ದು, ಗೆಲುವಿನ ಲಯ ಕಂಡುಕೊಳ್ಳುವುದು ಪಾಕ್ ತಂಡದ ಲೆಕ್ಕಾಚಾರವಾಗಿದೆ.
ನಸೀಮ್ ಶಾ ಅನುಪಸ್ಥಿತಿ ಹಾಗೂ ಸ್ಪಿನ್ ಬೌಲರ್‌ಗಳಿಂದ ನಿರೀಕ್ಷಿತ ಪ್ರದರ್ಶನ ಪಾಕ್ ಪಡೆಯ ಬೌಲಿಂಗ್ ವಿಭಾಗದ ಚಿಂತೆ ಹೆಚ್ಚಿಸಿದೆ. ಅಲ್ಲದೇ ಇದರಿಂದಾಗಿ ವೇಗದ ಬೌಲರ್‌ಗಳಾದ ಶಾಹೀನ್ ಅಫ್ರಿದಿ, ಹ್ಯಾರಿಸ್ ರೌಫ್ ಅವರ ಮೇಲೆ ಒತ್ತಡ ಹೆಚ್ಚುವಂತೆ ಮಾಡಿದೆ. ಬ್ಯಾಟಿಂಗ್ ವಿಭಾಗದಲ್ಲೂ ಸಾಕಷ್ಟು ಸಮಸ್ಯೆ ಕಾಡುತ್ತಿದ್ದು, ಪ್ರಮುಖ ಬ್ಯಾಟರ್‌ಗಳು ನಿರೀಕ್ಷಿತ ಪ್ರದರ್ಶನ ನೀಡದೆ ಇರುವುದು ನಾಯಕ ಬಾಬರ್ ಆಜ಼ಂ ಮೇಲಿನ ಒತ್ತಡ ಹೆಚ್ಚಾಗಿಸಿದೆ.
ಮತ್ತೊಂದೆಡೆ ಮಹತ್ವದ ಟೂರ್ನಿಯಲ್ಲಿ ಭಾಗವಹಿಸಲು 12 ವರ್ಷಗಳ ಬಳಿಕ ನೆದರ್ಲೆಂಡ್ಸ್ ತಂಡ ಭಾರತಕ್ಕೆ ಆಗಮಿಸಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದೊಡ್ಡ ಪಂದ್ಯಾವಳಿಗಳನ್ನ ಆಡದ ನೆದರ್ಲೆಂಡ್ಸ್, ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ವಿಶ್ವಕಪ್‌ನಲ್ಲಿ ಕಣಕ್ಕಿಳಿಯುತ್ತಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತಕ್ಕೆ ಆಗಮಿಸಿರುವ ನೆದರ್ಲೆಂಡ್ಸ್ ತಂಡ, ಕರ್ನಾಟಕ ತಂಡದ ವಿರುದ್ಧ ಕೆಲವು ಪಂದ್ಯಗಳನ್ನ ಆಡಿತ್ತು. ಆದರೆ ನೆದರ್ಲೆಂಡ್ಸ್ ಆಡಬೇಕಿದ್ದ ವಿಶ್ವಕಪ್‌ನ ಎರಡು ಅಭ್ಯಾಸ ಪಂದ್ಯಗಳು ಮಳೆಯಿಂದಾಗಿ ರದ್ದುಗೊಂಡಿತ್ತು. ಈ ಎಲ್ಲದರ ನಡುವೆಯೂ ಪಾಕ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗಿರುವ ನೆದರ್ಲೆಂಡ್ಸ್, ಆರಂಭಿಕ ಪಂದ್ಯದಲ್ಲಿ ಅಚ್ಚರಿಯ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.
ನೆದರ್ಲ್ಯಾಂಡ್ಸ್ ತಂಡ:
ಸ್ಕಾಟ್ ಎಡ್ವರ್ಡ್ಸ್(ನಾಯಕ), ಮ್ಯಾಕ್ಸ್ ಒಡೌಡ್, ಬಾಸ್ ಡಿ ಲೀಡೆ, ವಿಕ್ರಮ್ ಸಿಂಗ್, ತೇಜ ನಿಡಮನೂರು, ಪಾಲ್ ವ್ಯಾನ್ ಮೀಕೆರೆನ್, ಕಾಲಿನ್ ಅಕರ್‌ಮನ್, ವ್ಯಾನ್ ಡೆರ್ ಮೆರ್ವೆ, ಲೋಗನ್ ವ್ಯಾನ್ ಬೀಕ್, ಆರ್ಯನ್ ದತ್, ರಯಾನ್ ಕ್ಲೈನ್, ವೆಸ್ಲಿ ಬ್ಯಾರೆಸಿ, ಸಾಕಿಬ್ ಜುಲ್ಫಿಕರ್, ಶರೀಜ್ ಅಹ್ಮದ್, ಸೈಬ್ರಾಂಡ್ ಎಂಗಲ್‌ಬ್ರೆಕ್ಟ್.
ಪಾಕಿಸ್ತಾನ ತಂಡ:
ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಫಖರ್ ಜಮಾನ್, ಇಮಾಮ್-ಉಲ್-ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಸಲ್ಮಾನ್ ಅಲಿ ಅಘಾ, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ಹಸನ್ ಅಲಿ, ಶಾಹೀನ್ ಅಫ್ರಿದಿ, ಮೊಹಮ್ಮದ್ ಅಫ್ರಿದಿ ವಾಸಿಂ.