ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಶಮಿ, ತವರಿನಲ್ಲಿ ನಡೆಯುತ್ತಿರುವ 2023 ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಲು ಸಜ್ಜಾಗಿದ್ದಾರೆ.
ತಂಡದ ಪ್ರಮುಖ ವೇಗದ ಬೌಲರ್ ಆಗಿರುವ ಮೊಹಮ್ಮದ್ ಶಮಿ, ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದ ಏಕದಿನ ಸರಣಿಯಲ್ಲಿ ಐದು ವಿಕೆಟ್‌ಗಳನ್ನ ಪಡೆದು ಮಿಂಚಿದ್ದರು. ಆ ಮೂಲಕ ಬೌಲಿಂಗ್ ಲಯ ಕಂಡುಕೊಂಡಿರುವ ವೇಗಿ, ವಿಶ್ವಕಪ್‌ನಲ್ಲಿ ಪ್ಲೇಯಿಂಗ್ ಇಲವೆನ್‌ನಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯೊಂದಿಗೆ ಮಹತ್ವದ ಸರಣಿಯಲ್ಲಿ ಆಡುವ ತವಕದಲ್ಲಿದ್ದಾರೆ. ಈ ನಡುವೆ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳಲ್ಲಿ ಜಹೀರ್ ಖಾನ್ ದಾಖಲೆಯನ್ನ ಬ್ರೇಕ್ ಮಾಡುವತ್ತ ಶಮಿ ಕಣ್ಣಿಟ್ಟಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್‌ನಲ್ಲಿ ಹೆಚ್ಚು ವಿಕೆಟ್‌ಗಳನ್ನ ಪಡೆದಿರುವ ಟೀಂ ಇಂಡಿಯಾದ ಬೌಲರ್‌ಗಳಲ್ಲಿ ಜಹೀರ್ ಖಾನ್, ಅಗ್ರ ಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ 23 ಪಂದ್ಯಗಳನ್ನ ಆಡಿರುವ ಜಹೀರ್, 44 ವಿಕೆಟ್ ಪಡೆದಿದ್ದು, 2011ರ ವಿಶ್ವಕಪ್‌ನಲ್ಲಿ ಎಡಗೈ ವೇಗಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿದ್ದರು.
ಜಹೀರ್ ಖಾನ್ ನಂತರದಲ್ಲಿ ಕನ್ನಡಿಗ ಜಾವಗಲ್ ಶ್ರೀನಾಥ್, 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಭಾರತ ತಂಡದಲ್ಲಿ ದಶಕಗಳ ಕಾಲ ತಮ್ಮ ಬೌಲಿಂಗ್‌ನಿಂದ ಮಿಂಚಿದ್ದ ಶ್ರೀನಾಥ್, ಏಕದಿನ ವಿಶ್ವಕಪ್‌ನಲ್ಲಿ ಆಡಿರುವ 34 ಪಂದ್ಯಗಳಲ್ಲಿ 44 ವಿಕೆಟ್‌ಗಳನ್ನ ಪಡೆದಿದ್ದಾರೆ. ಇನ್ನೂ ಮತ್ತೋರ್ವ ಕನ್ನಡಿಗ ಅನಿಲ್ ಕುಂಬ್ಳೆ, ಏಕದಿನ ವಿಶ್ವಕಪ್‌ನಲ್ಲಿ ಅತ್ಯುತ್ತಮ ಪ್ರದರ್ಶನದಿಂದ ಭಾರತಕ್ಕೆ ಆಸರೆಯಾಗಿದ್ದರು. ಭಾರತದ ಪ್ರಮುಖ ಸ್ಪಿನ್ ಅಸ್ತ್ರವಾಗಿದ್ದ ʼಜಂಬೋʼ, ಏಕದಿನ ವಿಶ್ವಕಪ್‌ನಲ್ಲಿ 18 ಪಂದ್ಯಗಳಲ್ಲಿ 22.83ರ ಸರಾಸರಿಯೊಂದಿಗೆ 31 ವಿಕೆಟ್‌ಗಳನ್ನ ಪಡೆಯುವ ಮೂಲಕ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್‌ಗಳ ಸಾಲಿನಲ್ಲಿ 3ನೇ ಸ್ಥಾನ ಪಡೆದಿದ್ದಾರೆ.
ಸದ್ಯ ಈ ದಿಗ್ಗಜ ಕ್ರಿಕೆಟಿಗರ ದಾಖಲೆ ಮುರಿಯುವ ನಿರೀಕ್ಷೆಯಲ್ಲಿರುವ ವೇಗಿ ಮೊಹಮ್ಮದ್ ಶಮಿ, ಏಕದಿನ ವಿಶ್ವಕಪ್‌ನಲ್ಲಿ ಈವರೆಗೆ ಆಡಿರುವ 11 ಪಂದ್ಯಗಳಲ್ಲಿ 31 ವಿಕೆಟ್ಸ್ ಪಡೆದಿದ್ದಾರೆ. ಈ ಪ್ರದರ್ಶನದಲ್ಲಿ ಮೂರು ಬಾರಿ 4 ವಿಕೆಟ್ ಜೊತೆಗೆ ಒಮ್ಮೆ 5 ವಿಕೆಟ್ ಪಡೆದಿದ್ದು, ಹ್ಯಾಟ್ರಿಕ್ ಸಹ ಪಡೆದ ಹಿರಿಮೆ ಹೊಂದಿದ್ದಾರೆ.