ಇಂಡಿ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ , ಜಿಲ್ಲೆಯ ಅಭಿವೃದ್ಧಿಗಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು. ಎಲ್ಲಾ ಹುಳಿಗಳಲ್ಲಿ ಲಿಂಬೆ ಹುಳಿ ಶ್ರೇಷ್ಠ. ನಿಂಬೆಗಿಂತ ಹುಳಿಯಿಲ್ಲ, ದುಂಭಿಗಿಂತ ಕರೆಯಿಲ್ಲ, ಶಂಬುಗಿಂತ ದೊಡ್ಡ ದೇವರಿಲ್ಲ ಎಂದು ಅವರು ನಾಣ್ಣುಡಿ ಬಳಸಿ ಮಾತನಾಡಿದರು.
ನಾನು ಯಾವ ಕ್ಷೇತ್ರಕ್ಕೂ ಇಷ್ಟು ಹಣ ಕೊಟ್ಟಿಲ್ಲ. ಇಂಡಿಗೆ ಮಾತ್ರವೇ ₹4 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದೇನೆ. ಇದರಿಂದ ಇಂಡಿ ತಾಲೂಕಿನ 93 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತಿದೆ ಎಂದು ಡಿಕೆಶಿ ಹೇಳಿದರು.
ನಿಮ್ಮ ಶಾಸಕರು ನನಗೆ ಏನೂ ಬೇಡ, ನಮ್ಮ ಭಾಗದ ರೈತರಿಗೆ ನೆರವಾಗಬೇಕು ಎಂದು ಮನವಿ ಮಾಡಿದ್ದಾರೆ. ಹೀಗಾಗಿ ಹೊರ್ತಿ- ರೇವಣ್ಣ ಸಿದ್ದೇಶ್ವರ ಏತ ನೀರಾವರಿ, ತಿಡಗುಂದಿ ಶಾಖಾ ಕಾಲುವೆ ಹಾಗೂ ಇಂಡಿ ತಾಲೂಕಿನ 90 ಕೆರೆಗಳನ್ನು ಭರ್ತಿಗೊಳಿಸುವ ಯೋಜನೆಗಳಿಗೆ ಇಂದು ಶಂಕುಸ್ಥಾಪನೆ ಮಾಡಲಾಗಿದೆ. ವಿವಿಧ ಇಲಾಖೆಗಳಿಂದ ಒಟ್ಟಾರೆ 4,555 ಕೋಟಿ ಮೊತ್ತದ ಕಾಮಗಾರಿಗಳಿಗೆ ಇಂದು ಭೂಮಿ ಪೂಜೆ ಹಮ್ಮಿಕೊಂಡಿದ್ದೇವೆ ಎಂದರು.
₹4167 ಕೋಟಿಯ ಅಭಿವೃದ್ಧಿ ಕಾರ್ಯಗಳು:
ಇಂಡಿಯಲ್ಲಿ ₹4167 ಕೋಟಿಯಷ್ಟು ಮೊತ್ತದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದು ಕ್ಷೇತ್ರದ ಇತಿಹಾಸದಲ್ಲಿಯೇ ದೊಡ್ಡ ಪ್ರಮಾಣದ ಕಾಮಗಾರಿಯಾಗಿದ್ದು, ಇಲ್ಲಿ ಸಾಕಷ್ಟು ಬದಲಾವಣೆ ತರಲಿದೆ ಎಂದು ಡಿಕೆಶಿ ಹೇಳಿದರು.
ಸಾರಿಗೆ ಇಲಾಖೆಯಲ್ಲಿ ಶಕ್ತಿ ಯೋಜನೆ:
ಸಾರಿಗೆ ಇಲಾಖೆಯ ‘ಶಕ್ತಿ ಯೋಜನೆ’ಗೆ ₹12,669 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ. ಮಹಿಳಾ ಪ್ರಯಾಣಿಕರಿಗೆ ಉಚಿತ ಬಸ್ ಸವಾರಿ ಸೇರಿದಂತೆ ಹಲವು ಕಲ್ಯಾಣಮೂಲಕ ಯೋಜನೆಗಳು ಯಶಸ್ವಿಯಾಗಿ ನಡೆಯುತ್ತಿವೆ ಎಂದು ಉಪಮುಖ್ಯಮಂತ್ರಿ ಹೇಳಿದರು.
ಸರ್ಕಾರದಲ್ಲಿ ಹಣವಿಲ್ಲ, ಎಲ್ಲಾ ಹಣ ಗ್ಯಾರಂಟಿ ಯೋಜನೆಗಳಿಗೆ ಹೋಗಿವೆ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಿವೆ. ಇಂದು ಸಾರಿಗೆ ಇಲಾಖೆ ಮೂಲಕ ಜಾರಿಗೆ ತಂದ ಶಕ್ತಿ ಯೋಜನೆಯಲ್ಲಿ ಇಂದಿನವರೆಗೆ ಒಟ್ಟು 500 ಕೋಟಿ ಟ್ರಿಪ್ ಗಳನ್ನು ಪೂರೈಸಿದೆ. ಇಂದು ಮುಖ್ಯಮಂತ್ರಿಗಳು ಪ್ರಯಾಣಿಕರಿಗೆ 500ನೇ ಟಿಕೆಟ್ ನೀಡಿ ಈ ಕ್ಷಣವನ್ನು ಸಂಭ್ರಮಿಸಲಾಗಿದೆ ಎಂದು ಅವರು ಹೇಳಿದರು.
ಕಲಬುರ್ಗಿ, ಪಿರಿಯಾಪಟ್ಟಣ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ್ದೇವೆ. ಆರೋಗ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆಗಳಲ್ಲಿ ಕೂಡಾ ಆಧುನೀಕರಣ ಕೆಲಸಗಳು ನಡೆದಿವೆ” ಎಂದರು.
ಬಿಜೆಪಿಯ ಟೀಕೆಗಳಿಗೆ ಉತ್ತರ:
ನಮ್ಮ ಅಭಿವೃದ್ಧಿಯ ಮುಂದೆ ಬಿಜೆಪಿಯ ಟೀಕೆಗಳೆಲ್ಲಾ ಸತ್ತು ಹೋಗಿವೆ. ಬಿಜೆಪಿಯ ಆಡಳಿತವಿರುವ ರಾಜ್ಯಗಳು ಕೂಡಾ ಈಗ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಟೀಕಿಸಿದರು.
ಗ್ಯಾರಂಟಿ ಯೋಜನೆಗಳ ಮಹತ್ವ:
ನಾವು ದಿನಕ್ಕೊಂದು ಘೋಷಣೆ ಮಾಡುವುದಿಲ್ಲ, ಆದರೆ ತಿಂಗಳಿಗೆ ₹5 ಸಾವಿರ ಕೋಟಿ ಖರ್ಚು ಮಾಡುತ್ತೇವೆ ಬಡವರಿಗೆ ನೆರವಾಗಲು. ಇದು ನಮ್ಮ ಸರ್ಕಾರದ ಬದ್ಧತೆ ಎಂದು ಡಿಕೆಶಿ ವಿವರಿಸಿದರು.








