Siddaramaiah – D K Shivakumar | ಸಿದ್ದು ಭೇಟಿ ಬಗ್ಗೆ ಡಿಕೆಶಿ ಹೇಳಿದ್ದೇನು..?
ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯರ ನಡುವೆ ಮುಸುಕಿನ ಗುದ್ದಾಟ ಇದೆ ಅನ್ನುವ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಲೇ ಇದೆ.
ಈ ನಡುವೆ ಕಾಂಗ್ರೆಸ್ ಅಧ್ಯಕ್ಷರು ಇಂದು ಬೆಳಿಗ್ಗೆ ಸಿದ್ದರಾಮಯ್ಯರ ನಿವಾಸಕ್ಕೆ ಭೇಟಿ ನೀಡಿದ್ರು. ಈ ವೇಳೆ ಪ್ರಸ್ತುತ ರಾಜಕೀಯ ಬೆಳವಣಿಗೆ ಬಗ್ಗೆ ಪರಸ್ಪರ ಇಬ್ಬರ ನಾಯಕರು ಮಾತುಕತೆ ನಡೆಸಿದ್ದಾರೆ.
ಸಿದ್ದರಾಮಯ್ಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ೧೮ ರಂದು ಶಾಸಕರ ಸಭೆ ಇದೆ. ಎಐಸಿಸಿ ಕೆಲವು ಕಾರ್ಯಕ್ರಮ ಕೊಟ್ಟಿದ್ದಾರೆ. ನಿನ್ನೆ ಪದಾಧಿಕಾರಿಗಳು ಬಂದಿದ್ದರು.
ಮುಂದೆ ಸಂಘಟನೆಯ ವಿಚಾರದಲ್ಲಿ ನಿನ್ನೆ ಸಿದ್ದರಾಮಯ್ಯ ಅವರು ಸಹ ಕೆಲವು ಸಲಹೆ ನೀಡಿದ್ದಾರೆ. ನಿನ್ನೆ ಸಭೆಯ ಕೆಲ ಮಾಹಿತಿಯನ್ನು ಸಿದ್ದರಾಮಯ್ಯ ಅವರಿಗೆ ತಿಳಿಸಬೇಕಿತ್ತು. ಬೆಳಿಗ್ಗೆ ಮನೆಗೆ ತಿಂಡಿಗೆ ಬರಲು ಹೇಳಿದ್ದರು. ಅದಕ್ಕೆ ಬಂದು ಒಂದು ಗಂಟೆ ಚರ್ಚೆ ಮಾಡಿದೆ ಎಂದು ಹೇಳಿದರು.
ಇದೇ ವೇಳೆ ಸರಕಾರದ ವಿರುದ್ಧ ಕಿಡಿಕಾರಿದ ಡಿಕೆಶಿ, ರಾಜ್ಯದಲ್ಲಿ ಭ್ರಷ್ಟ ಸರ್ಕಾರ ಇದೆ. ಅದರ ವಿರುದ್ಧ ಹೋರಾಟ ಮಾಡಬೇಕಿದೆ. ಅದರ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.

ಇನ್ನು ಶಿಕ್ಷಣ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್, ಶಿಕ್ಷಣ ಸಚಿವರ ಹೇಳಿಕೆ ನಿಜವಾಗಲೂ ರಾಜ್ಯ ತಲೆ ತಗ್ಗಿಸುವ ಹೇಳಿಕೆಯಾಗಿದೆ. ಹಳ್ಳಿ ಶಾಲೆಯಲ್ಲಿ ಓದಿದವರು ದೊಡ್ಡ ಸ್ಥಾನಕ್ಕೆ ಹೋಗಿದ್ದಾರೆ.
ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ಬಟ್ಟೆಗಳನ್ನು ಕೊಡಿಸಲು, ಒಳ್ಳೆಯ ಶಾಲೆಯಲ್ಲಿ ಓದಿಸಲು ದುಡಿಯುತ್ತಾರೆ. ಅದಕ್ಕೆ ಸರ್ಕಾರವೂ ಸಹ ಶೂ, ಬಟ್ಟೆಗಳನ್ನು ಕೊಡುವ ಕಾರ್ಯಕ್ರಮ ಮಾಡಿದೆ. ಆದರೆ ಶಿಕ್ಷಣ ಸಚಿವರು ಇದಕ್ಕೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇವರ್ಯಾಕೆ ಬಟ್ಟೆಗಳನ್ನು ಹಾಕ್ತಾರೆ ಎಂದು ಪ್ರಶ್ನಿಸಿದರು.
ಅಲ್ಲದೇ ಇವರು ಬನಿಯನ್, ಚಡ್ಡಿ ಹಾಕಿಕೊಂಡು ವಿಧಾನಸೌಧಕ್ಕೆ ಬರಲಿ. ಸಚಿವರ ಹೇಳಿಕೆ ಅಗೌರವ ದಿಂದ ಕೂಡಿದೆ. ನಾನು ಸಿಎಂ ಮತ್ತು ಸಚಿವರಿಗೆ ಹೇಳ್ತೇನೆ.
ನಿಮ್ಮ ಬಳಿ ಹಣ ಇಲ್ಲದಿದ್ದರೆ ಹೇಳಿ, ಕಾಂಗ್ರೆಸ್ ನವರು ಭಿಕ್ಷೆ ಬೇಡಿ ಬಟ್ಟೆಗಳನ್ನು ಕೊಡ್ತಾರೆ. ನೊಂದ ಮಕ್ಕಳ, ಪೋಷಕರ ಗೌರವ ಕಾಪಾಡಲು ಕಾಂಗ್ರೆಸ್ ಬದ್ಧವಾಗಿದೆ. ಇದು ರಾಜ್ಯದ ಎಲ್ಲಾಮಕ್ಕಳ ಸ್ವಾಭಿಮಾನದ ವಿಚಾರ.
ನಮ್ಮಮಕ್ಕಳ ಬದುಕಿನ ವಿಚಾರ. ನೀವು ಮಕ್ಕಳನ್ನು ಅಗೌರವದಿಂದ ಕಾಣ್ತಾ ಇದ್ದೀರಾ..? ಸರ್ಕಾರ ಮೊದಲಿನಿಂದಲೂ ಶಾಲಾ ಮಕ್ಕಳಿಗೆ ಬಟ್ಟೆ, ಶೂ, ಶಾಕ್ಸ್ ಕೊಡ್ತಾ ಬಂದಿದ್ದೇವೆ.
ಕಾಂಗ್ರೆಸ್ ನಿಂದ ಒಂದು ಕಾರ್ಯಕ್ರಮ ಹಾಕಿಕೊಳ್ಳುತ್ತೇವೆ. ಎಲ್ಲಾ ತಾಲ್ಲೂಕು ಜಿಲ್ಲೆಯಲ್ಲಿ ಭಿಕ್ಷೆ ಎತ್ತಿ, ಮಕ್ಕಳಿಗೆ ಬಟ್ಟೆಗಳನ್ನು ಕೊಡ್ತೇವೆ. ಕಾರ್ಯಕರ್ತರಿಗೆ ನಾವು ಹೇಳ್ತೇನೆ. ಎಲ್ಲಾ ಮಕ್ಕಳಿಗೆ ಬಟ್ಟೆಗಳನ್ನು ಕೊಡಲು, ಶೂ, ಶಾಕ್ಸ್ ಕೊಡಲು ಹೇಳ್ತೇನೆ ಎಂದು ಹೇಳಿದರು.