Dr. KP Ashwini | ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿಗೆ ಕೋಲಾರದ ಮಹಿಳೆ..
ಕೋಲಾರ : ಏಷ್ಯಾದಿಂದಲೇ ಪ್ರಥಮ ಬಾರಿಗೆ ಕೋಲಾರ ಜಿಲ್ಲೆಯ ಮಹಿಳೆ ಡಾ.ಕೆ.ಪಿ.ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯುಎನ್ ಹೆಚ್ ಆರ್ ಸಿಗೆ ನೇಮಕಗೊಂಡಿದ್ದಾರೆ.
ಜಿನೀವಾ ಮೂಲದ 47 ಸದಸ್ಯರ ವಿಶ್ವಸಂಸ್ಥೆಯ ಮಾನವ ಹಕ್ಕು ಸಂಸ್ಥೆ, ಡಾ. ಅಶ್ವಿನಿ ಅವರ ನೇಮಕಾತಿಯನ್ನು ಅನುಮೋದಿಸಿದೆ.
ಅಶ್ವಿನಿ ಅವರು ಅರ್ಣಬೇಧ, ಕೈನೋಫೋಬಿಯಾ ಅಸಹಿಷ್ಣುತೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ವಹಿಸಲಿದ್ದಾರೆ.
ಕೆ.ಪಿ ಅಶ್ವಿನಿ ಅವರು ಕೋಲಾರ ಜಿಲ್ಲೆಯ ಕುರುಬರಹಳ್ಳಿ ಗ್ರಾಮದ ವಿ.ಪ್ರಸನ್ನ ಕುಮಾರ್ ಹಾಗೂ ಜಯಮ್ಮ ದಂಪತಿಯ ಜೇಷ್ಠ ಪುತ್ರಿ.
ಇವರು ತಮ್ಮ ವಿಧ್ಯಾಭ್ಯಾಸವನ್ನು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮಾಡಿ, ಸ್ನಾತಕೋತ್ತರ ಪದವಿಯನ್ನು ಸೆಂಟ್ ಜೋಸೆಫ್ ಕಾಲೇಜು ಹಾಗೂ ಎಂ.ಪಿಲ್, ಪಿಹೆಚ್ ಡಿ ಪದವಿಯನ್ನು ದೆಹಲಿಯ ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ.

ಇದಾದ ಬಳಿಕ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕೆಲ ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದು, ನಂತರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ಸೇವೆ ಮಾಡುತ್ತಾ ಒಡಿಸ್ಸಾ ಮತ್ತು ಛತ್ತೀಸ್ ಘಡ ರಾಜ್ಯಗಳ ಆದಿವಾಸಿಗಳ ಪ್ರದೇಶಗಳಲ್ಲಿ ಗಣಿಗಾರಿಕೆಯಿಂದ ಆದಿವಾಸಿಗಳ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆ ವಿಶೇಷ ಅಧ್ಯಯನ ಮಾಡಿರುತ್ತಾರೆ.
ಇವರು ಮೂಲತಃ ಅಂಬೇಡ್ಕರ್ ವಾದಿಗಳಾಗಿದ್ದಾರೆ. ದಲಿತ ಚಳುವಳಿಗಳಲ್ಲಿ ಕರ್ನಾಟಕ ಮತ್ತು ವಿದೇಶಗಳಲ್ಲಿ ಹೋರಾಟದ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಗಮನ ಸೆಳೆದಿದ್ದಾರೆ.

ಇದೀಗ ಅಶ್ವಿನಿ ಅವರು ವಿಶ್ವಸಂಸ್ಥೆಯ ಮಾನವ ಹಕ್ಕು ಸಮಿತಿ ಯು.ಎಸ್.ಹೆಚ್ ಆರ್ ಸಿಗೆ ನೇಮಕವಾಗಿರುವುದು ಕೋಲಾರದ ಜಿಲ್ಲೆಯ ಜನತೆಗೆ ಹೆಮ್ಮೆಯ ವಿಷಯವಾಗಿದೆ.








