ದಲಿತ ಯುವಕನಿಗೆ ಮೂತ್ರ ಕುಡಿಸಿದ ಆರೋಪ : ಪಿಎಸ್ಐ ವಿರುದ್ದ ಎಫ್ಐಆರ್
ಚಿಕ್ಕಮಗಳೂರು : ದಲಿತ ಯುವಕನಿಗೆ ಠಾಣೆಯಲ್ಲಿ ಮೂತ್ರ ಕುಡಿಸಿದ ಆರೋಪದಡಿ ಚಿಕ್ಕಮಗಳೂರು ತಾಲೂಕಿನ ಪಿಎಸ್ ಐ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಗೋಣಿಬೀಡು ಪೊಲೀಸ್ ಠಾಣೆಯ ಪಿಎಸ್ಐ ಅರ್ಜುನ್, ಕಳೆದ ಕೆಲ ದಿನಗಳ ಹಿಂದೆ ಕಿರಗುಂದದ ಪುನೀತ್ ಎಂಬ ಯುವಕನನ್ನು ವಿಚಾರಣೆಗೆ ಎಂದು ಠಾಣೆಗೆ ಕರೆಸಿದ್ದರು.
ಈ ವೇಳೆ ಆ ಯುವಕನನ್ನ ಮನಸ್ಸೋ ಇಚ್ಛೆ ಹಲ್ಲೆ ನಡೆಸಿದ್ದು ಅಲ್ಲದೆ ಬೇರೆ ಪ್ರಕರಣದ ಆರೋಪಿ ಮೂತ್ರ ಕುಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಠಾಣೆಯಲ್ಲಿ ಪಿಎಸ್ಐ ನನ್ನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ನನಗೆ ತುಂಬಾ ದಣಿವಾಗಿತ್ತು.
ಆಗ ನಾನು ನೀರು ಕೇಳಿದ್ದಕ್ಕೆ ಅರ್ಜುನ್ ಅವರು ಕಳ್ಳತನ ಆರೋಪದಡಿ ಠಾಣೆಗೆ ಕರೆತಂದಿದ್ದ ಬೇರೊಬ್ಬ ಆರೋಪಿ ಚೇತನ್ ನಿಂದ ನನ್ನ ಬಾಯಿಗೆ ಮೂತ್ರ ಮಾಡಿಸಿ ಯಾರಿಗಾದರೂ ಹೇಳಿದರೆ ಚೆನ್ನಾಗಿ ಇರುವುದಿಲ್ಲ ಎಂದು ಮನಸ್ಸೋ ಇಚ್ಚೆ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪ ಮಾಡಿದ್ದಾರೆ.
ಅಲ್ಲದೆ ಪುನೀತ್ ದಲಿತ ಪರ ಸಂಘಟನೆಗಳ ನೇತೃತ್ವದಲ್ಲಿ ಪಿಎಸ್ಐ ವಿರುದ್ಧ ಕ್ರಮಕ್ಕೆ ಚಿಕ್ಕಮಗಳೂರು ಎಸ್ಪಿಗೆ ದೂರು ನೀಡಿದ್ದಾರೆ.
ಈ ಹಿನ್ನೆಲೆ ಗೋಣಿಬೀಡು ಠಾಣೆಯಲ್ಲಿ ಪಿಎಸ್ಐ ಅರ್ಜುನ್ ವಿರುದ್ಧ ಐಪಿಸಿ ಸೆಕ್ಷನ್ 342, 323, 504, 506, 330, 348 ರ ಅಡಿ ಪ್ರಕರಣ ದಾಖಲಾಗಿದೆ.