ದಸರಾ ಹಬ್ಬ – ಕೆಟ್ಟದ್ದರ ಮೇಲೆ ಒಳ್ಳೆಯದರ ಗೆಲುವನ್ನು ಸಾರುವ ಹಬ್ಬ Dasara 2020
ಮಂಗಳೂರು, ಅಕ್ಟೋಬರ್ 25: ನವರಾತ್ರಿ ಎಂದರೆ ಮನಸ್ಸಲ್ಲಿ ಮೂಡುವುದು ತಾಯಿ ದುರ್ಗೆಯ ಅವತಾರ. ತಾಯಿಯ ಶಕ್ತಿಯ ಒಂದು ರೂಪ ದುರ್ಗಾ ದೇವತೆಯಾಗಿ ಅವತರಿಸಿ ರಾಕ್ಷಸ ರಾಜ ಮಹಿಷಾಸುರನನ್ನು ಸಂಹಾರ ಮಾಡಿದ ಆಚರಣೆಯನ್ನು ನವರಾತ್ರಿ ಸಂಕೇತಿಸುತ್ತದೆ. Dasara 2020

ನವರಾತ್ರಿ, ಅಂದರೆ ಒಂಬತ್ತು ರಾತ್ರಿಗಳು. ಈ ಒಂಬತ್ತು ದಿನಗಳಲ್ಲಿ ಭಕ್ತರು ದುರ್ಗಾ ದೇವಿಯ ವಿವಿಧ ಅವತಾರಗಳಾದ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಶ್ಮಂಡ, ಸ್ಕಂದ ಮಾತಾ, ಕಾತ್ಯಾಯಣಿ, ಕಾಲರಾತ್ರಿ, ಮಹಾಗೌರಿ, ಮತ್ತು ಸಿದ್ಧಿದತ್ರಿ ಪೂಜಿಸುತ್ತಾರೆ. ಹತ್ತನೇ ದಿನದಂದು ದಸರಾ ಅಥವಾ ವಿಜಯದಶಮಿ ಹಬ್ಬದೊಂದಿಗೆ ನವರಾತ್ರಿ ಮುಕ್ತಾಯಗೊಳ್ಳುತ್ತದೆ.
ಪುರಾಣಗಳ ಪ್ರಕಾರ ಮಹಿಷಾಸುರ ಎಂಬ ರಾಕ್ಷಸನನ್ನು ಸಂಹರಿಸಲು ಎಲ್ಲಾ ದೇವರುಗಳು ಶಕ್ತಿ ಸ್ವರೂಪಿಣಿ ತಾಯಿಯನ್ನು ಪ್ರಾರ್ಥಿಸಲು ಶಿಷ್ಟ ರಕ್ಷಣೆ ಗಾಗಿ ಆಕೆ ದುರ್ಗಾದೇವಿಯ ಅವತಾರ ತಾಳುತ್ತಾಳೆ. ದುಷ್ಟ ಶಕ್ತಿಯ ಸಂಹಾರಕ್ಕೆ ರೌದ್ರವತಾರ ತಾಳುವ ದುರ್ಗಾ ದೇವಿ ರಾಕ್ಷಸ ರಾಜ ಮಹಿಷಾಸುರನನ್ನು ಸಂಹರಿಸಿ ಭಕ್ತರ ರಕ್ಷಣೆ ಮಾಡುತ್ತಾಳೆ.

ನವರಾತ್ರಿಯ ಹತ್ತನೇ ದಿನದಂದು ದಸರಾ ಅಥವಾ ವಿಜಯದಶಮಿಯನ್ನು ಆಚರಿಸಲಾಗುತ್ತದೆ. ಇದು ಭಾರತದ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದು. ವಿಜಯ ದಶಮಿ ಅಥವಾ ದಸರಾ ಹಬ್ಬ ಕೆಟ್ಟದ್ದರ ವಿರುದ್ಧ ಒಳ್ಳೆಯದರ ಜಯವೆಂದು ಆಚರಿಸಲಾಗುತ್ತದೆ. ಇದನ್ನು ಕೆಲವೆಡೆ ಈ ವರ್ಷದ ಅಕ್ಟೋಬರ್ 25 ಅಂದರೆ ಇವತ್ತು ಆಚರಿಸಿದರೆ, ಇನ್ನೂ ಕೆಲವು ಸ್ಥಳಗಳಲ್ಲಿ, ಅಕ್ಟೋಬರ್ 26 ರಂದು ಆಚರಿಸಲಾಗುತ್ತದೆ.
ಈ ಹಬ್ಬದ ಬಗ್ಗೆ ಹಲವಾರು ಪೌರಾಣಿಕ ಕಥೆಗಳಿವೆ.

ಭಗವಾನ್ ರಾಮನು ರಾವಣನನ್ನು ಸಂಹಾರ ಮಾಡಿದ ದಿನ ದಸರಾ ಎಂದು ಒಂದು ಪೌರಾಣಿಕ ಕಥೆ ಹೇಳಿದರೆ, ದುರ್ಗಾ ದೇವಿಯು ಮಹಿಷಾಸುರ ಎಂಬ ರಾಕ್ಷಸನನ್ನು ಕೊಂದ ದಿನ ವಿಜಯ ದಶಮಿ ಎಂದು ಹೇಳುತ್ತಾರೆ. ಮತ್ತೊಂದು ಪೌರಾಣಿಕ ಕಥೆಯು ಪಾಂಡವರು ತಮ್ಮ ಒಂದು ವರ್ಷದ ಅಜ್ಞಾತ ವಾಸ ಮಾಡುವಾಗ ತಮ್ಮ ಆಯುಧಗಳನ್ನು ಬನ್ನಿ ಮರದಲ್ಲಿ ಬಚ್ಚಿಟ್ಟು ನಂತರ ಆ ಆಯುಧಗಳಿಂದ ಕೌರವರನ್ನು ಸೋಲಿಸಿ ಗೆಲುವು ಪಡೆದ ದಿನ ಎಂದೂ ಹೇಳಲಾಗುತ್ತದೆ. ದಸರಾ ಹಬ್ಬವು ವಿಜಯನಗರದ ಅರಸರು ಮತ್ತು ಮೈಸೂರು ಅರಸರು ಜೈತ್ರಯಾತ್ರೆಯಲ್ಲಿ ಗೆಲುವು ಪಡೆದು ಸಂಭ್ರಮದಿಂದ ನಡೆಸುವ ವಿಶಿಷ್ಟ ಹಬ್ಬ ಎಂದೂ ಇತಿಹಾಸದಲ್ಲಿ ಉಲ್ಲೇಖವಿದೆ.

ಈ ಹಬ್ಬವು ಕೆಟ್ಟದ್ದರ ವಿರುದ್ಧ ಒಳ್ಳೆಯತನ ಗೆಲ್ಲುತ್ತದೆ ಎಂದು ಹೇಳುವ ಸಂದೇಶವನ್ನು ಹೊಂದಿದೆ. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಅಥವಾ ಹೊಸ ಹೂಡಿಕೆಗಳನ್ನು ಮಾಡಲು ದಸರಾವನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ.
ನವರಾತ್ರಿಯ ಒಂಬತ್ತು ದಿನಗಳಲ್ಲಿ ದೇವಿಯ ಒಂಭತ್ತು ರೂಪಗಳನ್ನು ಭಕ್ತರು ಪೂಜಿಸುತ್ತಾರೆ. ಹತ್ತನೆಯ ದಿನವೇ ವಿಜಯದಶಮಿ. ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿಯನ್ನು ವಿನಿಮಯ ಮಾಡಿಕೊಳ್ಳುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದೇ ದಿನ ಜಗತ್ಪ್ರಸಿದ್ಧ ಮೈಸೂರು ದಸರಾ ಉತ್ಸವವು ವಿಜೃಂಭಣೆಯಿಂದ ನಡೆಯುತ್ತದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ಮೈಸೂರಿನಲ್ಲಿ ನಡೆಯುತ್ತದೆ.

ನಮ್ಮ ದೇಶದಲ್ಲಿ ಆಚರಿಸುವ ಪ್ರತಿಯೊಂದು ಆಚರಣೆಗಳು ಸಮಾಜಕ್ಕೆ ಸಂದೇಶವನ್ನು ಕೂಡ ನೀಡುತ್ತದೆ. ಅದೇ ರೀತಿ ನವರಾತ್ರಿ ಹಬ್ಬ ಕೂಡ ಜೀವನದ ಎಲ್ಲಾ ಪ್ರಕಾರಗಳಲ್ಲಿ ಹೆಣ್ಣುಮಕ್ಕಳನ್ನು ಗೌರವಿಸುವ ವಿಧಾನವನ್ನು ಸಾಂಕೇತಿಕವಾಗಿ ನಮಗೆ ಕಲಿಸುತ್ತದೆ.
ಹೆಣ್ಣು ಪ್ರೀತಿ ಕರುಣೆಯನ್ನು ತುಂಬಿಕೊಂಡಿರುವ ಕ್ಷಮಾಯಾಧರಿತ್ರಿ ಮಾತ್ರವಲ್ಲ, ಅನ್ಯಾಯ ಮತ್ತು ಅನೀತಿಗಳ ವಿರುದ್ಧ ಹೋರಾಡುವ ಶಕ್ತಿ ಸ್ವರೂಪಿಣಿ ಕೂಡ. ತನ್ನ ಮೇಲೆ ಅಥವಾ ತನ್ನವರ ಮೇಲೆ ದೌಜನ್ಯ ನಡೆದಾಗ ದೇವಿಯ ರೌದ್ರ ರೂಪವನ್ನು ಕೂಡ ಆಕೆ ಧರಿಸಬಲ್ಲಳು ಎಂಬುದನ್ನು ನವರಾತ್ರಿ ಸೂಚಿಸುತ್ತದೆ.

ಜೊತೆಗೆ ನವರಾತ್ರಿಯ ಕಥೆಯು ಮಹಿಳಾ ಸಬಲೀಕರಣದ ಮೂಲ ಮೌಲ್ಯಗಳನ್ನು ನಮಗೆ ಕಲಿಸುತ್ತದೆ ಮತ್ತು ಸಮಾಜದಲ್ಲಿ ಸ್ತ್ರೀ ಗೆ ಉನ್ನತ ಸ್ಥಾನ ನೀಡಿ ಗೌರವ ಸಲ್ಲಿಸುವ ಮಹತ್ವವನ್ನು ತಿಳಿ ಹೇಳುತ್ತದೆ. ಹೆಣ್ಣು ದುರ್ಗಾ ಮಾತೆಯಂತೆ ತನ್ನ ಅಸ್ತಿತ್ವವನ್ನು ಬಲಗೊಳಿಸಿ, ಮನಸ್ಸಿನಲ್ಲಿ ಪ್ರೀತಿ ಮತ್ತು ಕರುಣೆಯನ್ನು ತುಂಬಿಕೊಳ್ಳುವ ಸಂದೇಶವನ್ನು ನವರಾತ್ರಿ ತಿಳಿಸುತ್ತದೆ. ದಸರಾ ಹಬ್ಬವು ನವರಾತ್ರಿ ಹಬ್ಬದ ಮುಕ್ತಾಯದೊಂದಿಗೆ ದೀಪಾವಳಿಯ ಆಗಮನವನ್ನೂ ಕೂಡ ಸೂಚಿಸುತ್ತದೆ.
ಒಟ್ಟಿನಲ್ಲಿ ದಸರಾ ಹಬ್ಬವು ಮಾನವನಿಗೆ ಸಹಬಾಳ್ವೆ, ಸಹಮತ, ಜೀವನಮೌಲ್ಯ, ದುಷ್ಟಶಕ್ತಿಯ ಅಟ್ಟಹಾಸದ ವಿರುದ್ಧ ದೈವತ್ವವು ಸಾಧಿಸಿದ ಜಯ, ಕೆಟ್ಟದ್ದರ ವಿರುದ್ಧ ಒಳ್ಳೆಯತನದ ಗೆಲುವು, ಸ್ತ್ರೀ ಗೆ ಉನ್ನತ ಸ್ಥಾನ ನೀಡಿ ಗೌರವ ಸಲ್ಲಿಸುವ ಸಂದೇಶವನ್ನು ಸಾರುತ್ತದೆ.
ಸಮಸ್ತ ಓದುಗರಿಗೆ ಸಾಕ್ಷಾಟಿವಿ ವತಿಯಿಂದ ದಸರಾ ಹಬ್ಬದ ಶುಭಾಶಯಗಳು. ಜಗನ್ಮಾತೆ, ಕೊರೋನಾ ಎಂಬ ದುಷ್ಟ ಮಹಾಮಾರಿಯನ್ನು ನಿರ್ನಾಮಗೊಳಿಸಿ, ಅತಿವೃಷ್ಟಿ ಅನಾವೃಷ್ಟಿಯಿಂದ ಮನುಜಕುಲವನ್ನು ಕಾಪಾಡಲಿ ಎಂದು ಪ್ರಾರ್ಥಿಸೋಣ…
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ