ಅಪ್ಪಂದಿರ ದಿನಕ್ಕೆ ಮಗಳು ಬರೆದ ಪತ್ರ
ನನ್ನೊಲವು ನನ್ನ ಪಪ್ಪ
ಪ್ರೀತಿಯ ಪಪ್ಪ
ಎಲ್ಲರೂ ಇವತ್ತು fathers day ಆಚರಿಸ್ತಾ ಇದ್ದಾರಂತೆ. ನನ್ನ ಸ್ನೇಹಿತರೆಲ್ಲ ಚಂದದ ಶಬ್ದಗಳಿಂದ ತಮ್ಮ ಸ್ಟೇಟಸನ್ನು ಅಲಂಕರಿಸಿದ್ದಾರೆ. ಕೆಲವರದ್ದು ತೋರಿಕೆಯಾದರೆ ಇನ್ನು ಕೆಲವರಿಗೆ ನನ್ನಂತೆ ಪಪ್ಪ ಅಂದರೆ ಪ್ರೀತಿ. ಆದರೆ ಅವರ ತಂದೆ ಬಗ್ಗೆ ಅವರೆಲ್ಲ ಹೇಳಿಕೊಳ್ಳುವಾಗ ಯಾವಾಗ್ಲೂ ನನ್ನ ಪಪ್ಪನೇ ಗ್ರೇಟ್ ಅನಿಸೋದು. ಯಾಕೆ ಗೊತ್ತಾ ನೀವು ನಮ್ಮನ್ನು ಪ್ರೀತಿಸೋ ರೀತಿ.
ಒಮ್ಮೊಮ್ಮೆ ನಾನು ಏನು ಯೋಚಿಸ್ತೀನಿ ಗೊತ್ತಾ ನಾನು ಮತ್ತು ಅಮ್ಮ ಎಷ್ಟು ಅದೃಷ್ಟವಂತರು ಅಲ್ವಾ. ನಮ್ಮಿಬ್ಬರನ್ನೂ ಅದೆಷ್ಟು ಪ್ರೀತಿಸ್ತೀರಿ. ನಮ್ಮನ್ನು ಮಾತ್ರವಲ್ಲ ನಿಮ್ಮ ಸುತ್ತಮುತ್ತಲಿನವರನ್ನು , ಆತ್ಮೀಯರನ್ನು ಬೇಗನೇ ಹಚ್ಚಿಕೊಂಡು ಬಿಡ್ತೀರಿ. ಆ ನಿಮ್ಮ ಮುಗ್ದತೆಯ ದುರುಪಯೋಗ ಆಗದಿರಲಿ. ಒಮ್ಮೊಮ್ಮೆ ನನಗೆ ಆ ಕುರಿತು ಚಿಂತೆಯೂ ಆಗುವುದಿದೆ.
ನಿಮ್ಮ ಪ್ರೀತಿ ತುಂಬಿದ ಕಣ್ಣು, ಮುದ್ದು ನಗು ನನಗೆ ತುಂಬಾ ಇಷ್ಟ ಪಪ್ಪ.
ಯಾವಾಗ್ಲೂ ನಾನು ಒಂದಲ್ಲ ಒಂದು ಕೆಲಸದಲ್ಲಿ ಬಿಜಿ ಇರ್ತಿದ್ದೆ. ಕಾಲೇಜು, ಪ್ರಾಜೆಕ್ಟ್ ಅಂತ ತಲೆ ಕೆಡಿಸಿ ಕೊಳ್ಳುತ್ತಿದ್ದೆ.ಆಗ ನನ್ನ ಪಕ್ಕದಲ್ಲೇ ಕುಳಿತು ನನ್ನ ತಲೆಸವರುತ್ತಾ, ನನಗೆ ಹಣ್ಣು ತಿನ್ನಿಸುವಾಗ, ನನಗಿಷ್ಟದ ಜ್ಯೂಸ್ ಮಾಡಿಕೊಡುವಾಗ, ನನಗಿಷ್ಟವಾದ ಸ್ನ್ಯಾಕ್ಸ್ ಮಾಡಿಕೊಡುವಾಗ ನಿಮಗೆ ನಾನು ಇನ್ನೂ ಪುಟ್ಟ ಮಗುವೇ ಅಲ್ವಾ ಪಪ್ಪಾ… ಆಗೆಲ್ಲ ಖುಷಿಯಿಂದ ನನ್ನ ಕಣ್ತುಂಬಿ ಬರುತ್ತಿತ್ತು.
ಕೊರೊನಾದ ಲಾಕ್ ಡೌನ್ ಸಮಯ ನಾವು ಮೂವರೂ ಜೊತೆಯಾಗಿ ಕಳೆದ ದಿನಗಳು ನಿಜಕ್ಕೂ ನಿಮ್ಮನ್ನು ನನ್ನ ದೃಷ್ಟಿಯಲ್ಲಿ ಮತ್ತಷ್ಟು ಎತ್ತರಕ್ಕೇರಿಸಿದೆ.
ರಜೆಯಲ್ಲೂ ಅಮ್ಮ ಓದು ಬರಹ ಅಂತ ಬಿಜಿಯಾಗಿದ್ರೆ ನಾನು ನನ್ನ ಇಂಟರ್ನ್ ಶಿಪ್ ಕೆಲಸದಲ್ಲಿ ವ್ಯಸ್ತಳಾಗಿದ್ದೆ. ಹೊಸ ಅನುಭವ. ಕೆಲಸ ಕಷ್ಟ ಅನಿಸಿದಾಗ ನನಗೆ ಅಳು ಬರುತ್ತಿತ್ತು. ಆಗ ನನ್ನ ಬಳಿ ಬಂದು ಸಾಂತ್ವನ ಮಾಡುತ್ತಾ ಜೀವನ ಅಂದ್ರೆ ಏನು ಅನ್ನೋದನ್ನು ಹೇಳ್ತಾ ಮುದ್ದಿಸಿ ನನ್ನ ಕಷ್ಟವೆಲ್ಲ ದೂರಾಗುವಂತೆ ಮಾಡುತ್ತಿದ್ದಿರಿ.
ನನಗೆ ನನ್ನ ಅಪ್ಪ ಅಮ್ಮನ ಬಗ್ಗೆ ಸದಾ ಹೆಮ್ಮೆ. ನಾನು ಇಷ್ಟು ದೊಡ್ಡವಳಾದರೂ ನಿಮ್ಮಿಬ್ಬರ ನಡುವೆ ಮನಸ್ತಾಪ, ಜಗಳ ಆದದ್ದನ್ನು ನಾನು ನೋಡಿಲ್ಲ. ಅಮ್ಮನನ್ನು ನೀವೆಷ್ಟು ಪ್ರೀತಿಯಿಂದ ನೋಡಿಕೊಳ್ತೀರಿ. ಅಮ್ಮನಿಗೊಂದು ಸಣ್ಣ ತಲೆನೋವು ಬಂದರೂ ಅವರನ್ನು ಮಗುವಿನಂತೆ ನೋಡಿಕೊಳ್ತೀರಿ. ಅದಕ್ಕೆ ನಾವು ಅದೃಷ್ಟವಂತರು ಎಂದದ್ದು.
ಪಪ್ಪ ನಮಗಿರುವ ಕೊರಗು ಒಂದೇ ನೀವು ಸದಾ ನಮ್ಮ ಜೊತೆಯಲ್ಲಿ ಇರಬೇಕು ಎಂದು. ನಿಮ್ಮ ವ್ಯಾಪಾರದ ನಿಮಿತ್ತ ಪುಣೆಗೆ ಮತ್ತೆ ಹೊರಟು ನಿಂತಾಗ ಎಷ್ಟು ದು:ಖವಾಗಿತ್ತು ಗೊತ್ತಾ.
ಅಮ್ಮನಂತೂ ಕ್ಷಣ ಕ್ಷಣಕ್ಕೂ ನಿಮ್ಮನ್ನು ಮಿಸ್ ಮಾಡ್ತಾ ಇದ್ದರು.
ನಿಮ್ಮ ಸರಳತೆ ನನಗೆ ತುಂಬಾ ಇಷ್ಟ ಆಗೋದು. ಅಮ್ಮ ಅಡುಗೆ ಮನೆಗೆ ಹೋದ್ರೆ ಅಲ್ಲೂ ನೀವು ಜೊತೆಯಾಗಿ ಕೆಲಸ ಮಾಡುತ್ತಿದ್ದೀರಿ. ಮನೆಯ ಉಳಿದ ಕೆಲಸದಲ್ಲೂ ಅಮ್ಮನಿಗೆ ಸಹಾಯ ಮಾಡುತ್ತಿದ್ದೀರಿ. ಅದನ್ನು ನೋಡಿ ನನಗೆ ತುಂಬಾ ಖುಷಿ. ನನ್ನ ದೃಷ್ಟಿಯಲ್ಲಿ ನಿಜವಾದ ಆದರ್ಶ ದಂಪತಿಗಳು ಅಂದ್ರೆ ನೀವೇ..
ನನ್ನ ಸ್ನೇಹಿತೆಯರು ಹೇಳುವುದನ್ನು ಕೇಳಿದ್ದೆ ಅವರ ತಂದೆಗೆ ಎಲ್ಲಾ ಸೇವೆ ಅಮ್ಮ ಮಾಡಿಕೊಡಬೇಕು ಎಂದು. ಆದ್ರೆ ನಮ್ಮಲ್ಲಿ ಅದನ್ನು ಯಾವತ್ತೂ ನೋಡಿಲ್ಲ.
ಪಪ್ಪ ನಾನು ಹೆಚ್ಚು ಬರೆಯಲ್ಲ. ನೀನೇ ನನ್ನ ಸರ್ವಸ್ವ. ನೀನೇ ನನ್ನ ಬಾಳ ಬೆಳಕು. ನನ್ನನ್ನು ರಾಜಕುಮಾರಿಯಂತೆ ಬೆಳೆಸುತ್ತಿರುವಿರಲ್ಲ. ನನ್ನ ಕನಸಿನ ರಾಜಕುಮಾರನೂ ನಿಮ್ಮಂತೇ ಇರಬೇಕೆಂದು ಬಯಸುತ್ತೇನೆ. ನನಗೇನು ಬೇಕೆಂದು ನಾನು ಕೇಳುವ ಮೊದಲೇ ನನಗೆ ಬೇಕಾದುದನ್ನು ತಂದು ಕೊಡುವಿರಲ್ಲ. ಜತನವಾಗಿ, ಜೋಪಾನವಾಗಿ ಕಾಪಿಡುವ ನಿಮ್ಮ ಪ್ರೀತಿಗಿಂತ ದೊಡ್ಡ ಆಸ್ತಿ ಇನ್ನೊಂದಿಲ್ಲ ಪಪ್ಪ.
I love you papa..
ನನ್ನ ನಿಮ್ಮ ಪ್ರೀತಿ ಎಷ್ಟೆಂದು ಇಷ್ಟರಲ್ಲೇ ಹೇಳುವೆ..
ಹೃದಯದಿಂದ ಹೃದಯಕ್ಕೆ ಬೆಸೆವ ಪ್ರೀತಿ..
ನೀ ಜೊತೆಯಲ್ಲಿದ್ದರೆ ನನಗಿಲ್ಲ ಭೀತಿ..
ನನಗಿಷ್ಟ ನೀ ನನ್ನ ಪ್ರೀತಿಸುವ ರೀತಿ..
ನಿನ್ನ ಪ್ರೀತಿಯೇ ನನ್ನ ಬದುಕಿನ ಆಸ್ತಿ..
ಐ ಲವ್ ಯೂ ಪಪ್ಪ..
Yours princess
ಸ್ವೀಕೃತಿ ಸುಧಾಕರ ಶೆಟ್ಟಿ,
ಅನುವಾದ ಡಾ.ಪೂರ್ಣಿಮಾ ಎಸ್ ಶೆಟ್ಟಿ