ತಂಡಕ್ಕಾಗಿ ಶತಕ ತ್ಯಾಗ ಮಾಡಿ ಕ್ರೀಡಾ ಸ್ಪೂರ್ತಿ ಮೆರೆದ ಡೇವಿಡ್ ವಾರ್ನರ್
IPL 2022 ರ 50 ನೇ ಪಂದ್ಯವನ್ನ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. 21 ರನ್ ಗಳಿಂದ ಹೈದ್ರಾಬಾದ್ ತಂಡವನ್ನ ಸೋಲಿಸಿ 2 ಪ್ರಮುಖ ಪಾಯಿಂಟ್ ಗಳನ್ನ ತನ್ನ ಖಾತೆಗೆ ಹಾಕಿಕೊಂಡಿದೆ. ಕ್ಯಾಪಿಟಲ್ಸ್ ನ ಈ ಗೆಲುವಿನಲ್ಲಿ ರೋವ್ಮನ್ ಪೊವೆಲ್ ಮತ್ತು ಡೇವಿಡ್ ವಾರ್ನರ್ ಪ್ರಮುಖ ಪಾತ್ರ ವಹಿಸಿದರು. ವಾರ್ನರ್ ಅಜೇಯವಾಗಿ 92 ರನ್ ಗಳಿಸಿದರೆ ಪೋವೆಲ್ 67 ರನ್ ಗಳಿಸಿ ಔಟಾಗದೆಯೇ ಮರಳಿದರು.
19 ಓವರ್ ನ ಅಂತ್ಯದಲ್ಲಿ 92 ರನ್ ಗಳಿಸಿದ್ದ ವಾರ್ನರ್ ಮೇಲೆ ಎಲ್ಲರ ಕಣ್ಣುಗಳು ನೆಟ್ಟಿದ್ದವು, 20 ನೇ ಓವರ್ ಶತಕ ಸಿಡಿಸುವುದನ್ನ ಕಾಣಬೇಕೆಂಬ ತವಕ ಪ್ರೇಕ್ಷಕರಲ್ಲಿ ಕಾಣಿಸುತ್ತಿತ್ತು. 20 ಓವರ್ ನ ಆರಂಭದಲ್ಲಿ ಪೋವೆಲ್ ಅರ್ಧಶತಕಕ್ಕೆ 1 ರನ್ ಅಗತ್ಯವಿತ್ತು. ವಾರ್ನರ್ ಈ ಋತುವಿನ ಚೊಚ್ಚಲ ಶತಕ ದಾಖಲಿಸಿಲು 8 ರನ್ ಗಳ ಅಂತರದಲ್ಲಿದ್ದರು.
ಹಂತದಲ್ಲಿ ಪೋವೆಲ್ ವಾರ್ನರ್ ಗೆ ಅವಕಾಶ ಕೊಡಲು ಮುಂದಾಗಿದ್ದರು, ಆದರೆ ವಾರ್ನರ್ ಅದನ್ನ ತಿರಸ್ಕರಿಸಿ “ನನ್ನಿಂದ ಎಷ್ಟು ದೂರ ಸಾದ್ಯವೋ ಅಷ್ಟು ದೂರಕ್ಕೆ ಹೊಡೆಯಿರಿ” ಎಂದು ವಾರ್ನರ್, ಪೋವೆಲ್ ಗೆ ಹೇಳಿದರಂತೆ. ನಾನು ವಾರ್ನರ್‌ಗೆ ಶತಕ ಗಳಿಸಲು ಸಿಂಗಲ್ ಬೇಕೇ ಎಂದು ಕೇಳಿದೆ, ಆದರೆ ನಾವು ಈ ರೀತಿ ಕ್ರಿಕೆಟ್ ಆಡುವುದಿಲ್ಲ ಎಂದು ಅವರು ನನಗೆ ಹೇಳಿದರು. ಚೆಂಡನ್ನು ನಿಮಗೆ ಸಾಧ್ಯವಾದಷ್ಟು ಬಲವಾಗಿ ಹೊಡೆಯಿರಿ ಎಂದರು. ನಂತರ ನಾನು ನನ್ನ ಆಟ ಆಡಿದೆ ಎಂದು ಪೋವೆಲ್ ಹೇಳಿದರು.
ವಾರ್ನರ್ ತಂಡಕ್ಕಾಗಿ ತಮ್ಮ ಶತಕವನ್ನು ತ್ಯಾಗ ಮಾಡಿದರು, ಅವರ ತ್ಯಾಗಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿತು ಎಂಬುದು ಪೊವೆಲ್ ಹೇಳಿಕೆಯಿಂದ ಸ್ಪಷ್ಟವಾಗಿದೆ. ಕೊನೆಯ ಓವರ್‌ನಲ್ಲಿ ಪೋವೆಲ್ 19 ರನ್ ಗಳಿಸಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆಗರೆದರು.
ಡೆಲ್ಲಿ ವಿರುದ್ಧದ ಅಜೇಯ 92 ರನ್‌ಗಳ ಆಧಾರದ ಮೇಲೆ ಡೇವಿಡ್ ವಾರ್ನರ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಐಪಿಎಲ್‌ನಲ್ಲಿ ಇದು 18ನೇ ಬಾರಿಗೆ ವಾರ್ನರ್‌ಗೆ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಇದರೊಂದಿಗೆ ಐಪಿಎಲ್‌ನಲ್ಲಿ 17 ಬಾರಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದ ಧೋನಿ ಅವರನ್ನು ವಾರ್ನರ್ ಹಿಂದಿಕ್ಕಿದ್ದಾರೆ. ಈ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನ ಸರಿಗಟ್ಟಿದರು.
ರೋಹಿತ್ ಈ ಲೀಗ್‌ನಲ್ಲಿ ಇದುವರೆಗೆ 18 ಬಾರಿ ಈ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿರುವ ವಿಚಾರದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.