ಕಾವೇರಿ ಕುವರ ಜಿ.ಮಾದೇಗೌಡರ ನಿಧನಕ್ಕೆ ಡಿಸಿಎಂ ಅಶ್ವಥ್ ನಾರಾಯಣ್ ಕಂಬನಿ DCM Ashwath Narayan
ಬೆಂಗಳೂರು : ಹಿರಿಯ ರಾಜಕಾರಣಿ, ರೈತಪರ ನಾಯಕ, ಹೋರಾಟಗಾರ ಜಿ.ಮಾದೇಗೌಡರ ನಿಧನಕ್ಕೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಂಬನಿ ಮಿಡಿದಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಕೆ.ಎಂ.ದೊಡ್ಡಿಯ ಆಸ್ಪತ್ರೆಗೆ ಭೇಟಿ ನೀಡಿ ಅವರ ಯೋಗಕ್ಷೇಮ ವಿಚಾರಿಸಿಕೊಂಡು ಬಂದಿದ್ದೆ. ಆರೋಗ್ಯ ಸುಧಾರಣೆಯಾಗಿ ಕ್ಷೇಮವಾಗಿ ಅವರು ಮನೆಗೆ ವಾಪಸ್ ಬರುತ್ತಾರೆಂಬ ವಿಶ್ವಾಸವಿತ್ತು. ಆದರೆ ನನ್ನನ್ನೂ ಒಳಗೊಂಡಂತೆ ಅಸಂಖ್ಯಾತ ಅಭಿಮಾನಿಗಳನ್ನು ನಿರಾಶೆಗೊಳಿಸಿ ಅವರು ಅಗಲಿರುವುದು ತೀವ್ರ ದುಃಖ ಉಂಟು ಮಾಡಿದೆ.
ಛಲಬಿಡದ ಹೋರಾಟಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡಿದ ಅವರು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದರು. ಮಂಡ್ಯ ಲೋಕಸಭಾ ಕ್ಷೇತ್ರವನ್ನು ಎರಡು ಬಾರಿ ಪ್ರತಿನಿಧಿಸಿದ್ದರು. ಕಾವೇರಿ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಂತು ಮುನ್ನಡೆಸಿದ ಅವರು, ರೈತರ ಹಿತಕ್ಕಾಗಿ ತಮ್ಮ ರಾಜಕೀಯ ಭವಿಷ್ಯವನ್ನು ಲೆಕ್ಕಿಸದ ನಿಷ್ಠುರ ನಾಯಕರಾಗಿದ್ದರು. ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನ ತೆರೆದ ಪುಸ್ತಕವಾಗಿತ್ತು.
ಜೀವನಪೂರ್ತಿ ಹೋರಾಟ, ಮೌಲ್ಯಗಳೊಂದಿಗೆಯೇ ಬದುಕಿದ ಮಾದೇಗೌಡರು ಮಂಡ್ಯ ಜಿಲ್ಲೆಗೆ ಮಾತ್ರವಲ್ಲ ಇಡೀ ರಾಜ್ಯ ಮತ್ತು ದೇಶಕ್ಕೆ ಗೌರವ ತಂದುಕೊಟ್ಟ ಅಪರೂಪದ ನಾಯಕರಾಗಿದ್ದರು. ಸರಳತೆ, ಸಜ್ಜನಿಕೆ ಹಾಗೂ ನೇರ ನಡವಳಿಕೆಯಿಂದ ಮಾದರಿಯಾಗಿದ್ದರು.
ಜಿ.ಮಾದೇಗೌಡರ ನಿಧನ ವೈಯಕ್ತಿಕವಾಗಿ ನನಗೆ ಬಹಳ ದುಃಖ ಉಂಟು ಮಾಡಿದೆ. ಅವರ ಅಗಲಿಕೆಯನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ, ಅಭಿಮಾನಿಗಳಿಗೆ ಸಿಗಲಿ ಹಾಗೂ ಆ ಮಹಾನ್ ಚೇತನಕ್ಕೆ ಚಿರಶಾಂತಿ ದೊರೆಯಲಿ ಎಂದು ಡಾ.ಅಶ್ವತ್ಥನಾರಾಯಣ ಪ್ರಾರ್ಥನೆ ಮಾಡಿದ್ದಾರೆ.