ಬೆಂಗಳೂರು : ಕೊರೊನಾ ವಾರಿಯರ್ಸ್ ಗೆ ನೋಟಿಸ್ ನೀಡಿರುವ ವಿಚಾರಕ್ಕೆ ಡಿಸಿಎಂ ಸಿ.ಎನ್. ಅಶ್ವಥ್ ನಾರಾಯಣ್, ಯಾರು ಕೆಲಸ ಮಾಡಲ್ಲ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿದ್ದು ಜವಾಬ್ದಾರಿ ನಿರ್ವಹಣೆ ಮಾಡದಿದ್ದರೆ ಹೇಗೆ. ಜನರ ಸೇವೆಯನ್ನು ಎಲ್ಲರೂ ಮಾಡಬೇಕು. ಮಾಡದಿದ್ದರೆ ಅಂತವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಈ ವೈರಸ್ ಏನೂ ಭಯಾನಕವಲ್ಲ, ಇವರೇ ರಾಜ್ಯದ ಜನರಿಗೆ ಮಾದರಿಯಾಗಬೇಕಿತ್ತು. ಆದರೆ, ಅವರೇ ದೂರ ಉಳಿದರೆ ಹೇಗೆ. ಹೀಗಾಗಿ ನೋಟಿಸ್ ನೀಡಲಾಗಿದೆ. ಅವರಿಗೆ ಬೇಕಾದ ಎಲ್ಲಾ ರಕ್ಷಣೆಯನ್ನು ಕೊಡುತ್ತೇವೆ. ಯಾರು ಕೆಲಸ ಮಾಡಲ್ಲ, ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಕೊರೊನಾ ವಾರಿಯರ್ಸ್ ಗಳಿಗೆ ಡಿಸಿಎಂ ಅಶ್ವಥ್ ನಾರಾಯಣ್ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ಮಳೆ, ನೆರೆ ಬಗ್ಗೆ ಮಾತನಾಡಿದ ಡಿಸಿಎಂ, ಈ ಬಾರಿ ಮಳೆ ಅನಾಹುತ ಎದುರಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ಭೀತಿ ಇರುವ ಕಡೆ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುತ್ತಿದೆ. ನೆರೆ ನಿರ್ವಹಣೆ, ಜನರ ರಕ್ಷಣೆಗೆ ಸರ್ಕಾರ ಸಿದ್ಧವಾಗಿದೆ. ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಸಹಕಾರ ಸಿಗುತ್ತಿದೆ. ಪ್ರಕೃತಿವಿಕೋಪಗಳ ವೇಳೆ ಸಿಗಬೇಕಾದ ಅನುದಾನ ಸಿಗುತ್ತೆ. ಕೇಂದ್ರ ಪ್ರಕೃತಿವಿಕೋಪ ಬಂದಾಗಲೆಲ್ಲ ನೆರವು ಕೊಟ್ಟಿದೆ. ಕೇಂದ್ರ ಎಲ್ಲಾ ಸಂದರ್ಭದಲ್ಲೂ ಸಂಪೂರ್ಣ ಸಹಕಾರ ಕೊಟ್ಟಿದೆ ಎಂದು ಹೇಳಿದರು.








