ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಕಾರಣವೊಡ್ಡಿ ಆಸ್ಪತ್ರೆಗಳ ನಿರ್ಲಕ್ಷ್ಯಕ್ಕೆ ಪುಟ್ಟ ಕಂದಮ್ಮಗಳ ಸಾವಿನ ಸರಣಿ ಮುಂದುವರೆದಿದೆ. ಬೆಂಗಳೂರಿನಲ್ಲಿ ಕಣ್ಣು ಬಿಡುವ ಮೊದಲೇ ಹಸುಳೆಯೊಂದು ಮೃತಪಟ್ಟರೆ, ರಾಮನಗರದಲ್ಲಿ 7 ತಿಂಗಳ ಪುಟ್ಟ ಕಂದಮ್ಮ ಉಸಿರು ಚೆಲ್ಲಿದೆ.
ಬೆಂಗಳೂರಿನ ಶ್ರೀರಾಮಪುರದ ಗರ್ಭಿಣಿಯೊಬ್ಬರಿಗೆ ಕಳೆದ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಶ್ರೀರಾಮಪುರದ ಸರ್ಕಾರಿ ಆಸ್ಪತ್ರೆಗೆ ಆಟೋದಲ್ಲೇ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸಿಲ್ಲವಾದರೆ ಅಡ್ಮಿಟ್ ಮಾಡಿಕೊಳ್ಳಲ್ಲ ಎಂದು ವಾಪಸ್ ಕಳಿಸಿದ್ದಾರೆ.
ನಂತರ ವಾಣಿ ವಿಲಾಸ ಆಸ್ಪತ್ರೆಗೆ ಕರೆದೊಯ್ದರೂ ಇದೇ ಕತೆ. ಕೊರೊನಾ ಟೆಸ್ಟ್ ಮಾಡಿಸಿ, ಇಲ್ಲ ಸ್ಕ್ಯಾನಿಂಗ್ ಮಾಡಿಸಿ ಎಂದು ವಾಣಿ ವಿಲಾಸ ಆಸ್ಪತ್ರೆ ವೈದ್ಯರು ಸಬೂಬು ಹೇಳಿ ಕಳಿಸಿದ್ದಾರೆ. ಮಧ್ಯ ರಾತ್ರಿಯಲ್ಲಿ ಸ್ಕ್ಯಾನಿಂಗ್ ಯಾರು ಮಾಡುತ್ತಾರೆ ಎಂದು ಬೇರೆ ದಾರಿ ಇಲ್ಲದೆ ಮತ್ತೆ ಶ್ರೀರಾಮಪುರಂನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಸಿಬ್ಬಂದಿಗೆ ಅಡ್ಮಿಟ್ ಮಾಡಿಕೊಳ್ಳಲೇ ಇಲ್ಲ. ಬೇರೆ ದಾರಿ ಇಲ್ಲದೆ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಹೆರಿಗೆ ಮಾಡಿಸುವಂತೆ ವೈದ್ಯರು ಹಾಗೂ ಸಿಬ್ಬಂದಿಯನ್ನು ಅಂಗಲಾಚಿದ್ದಾರೆ. ರಾತ್ರಿ ಇಡೀ ಆಟೋದಲ್ಲೇ ಐದಾರು ಆಸ್ಪತ್ರೆಗಳಿಗೆ ಸುತ್ತಾಡಿದ್ದಾರೆ. ಕೆ.ಸಿ ಜನರಲ್ ಆಸ್ಪತ್ರೆಯಲ್ಲೂ ವಿಳಂಬ ಮಾಡಿದ ಕಾರಣ ಆಟೋದಲ್ಲೇ ಹೆರಿಗೆಯಾಗಿದೆ. ಆದರೆ ಹೆರಿಗೆಯಾದ ಕೆಲವೇ ಕ್ಷಣಗಳಲ್ಲಿ ಲೋಕ ನೋಡದೇ ಕಂದಮ್ಮ ಕಣ್ಣು ಮುಚ್ಚಿದೆ.
ಮಗು ಸತ್ತ ಮೇಲೆ ಬಂದ ಕೆ.ಸಿ ಜನರಲ್ ಆಸ್ಪತ್ರೆ ಸಿಬ್ಬಂದಿ, ಬಾಣಂತಿಯನ್ನು ಆಸ್ಪತ್ರೆ ಒಳಗೆ ಕರೆದೊಯ್ದಿದ್ದಾರೆ. ಕೊರೊನಾ ಟೆಸ್ಟ್ ಮಾಡಿಸಿಲ್ಲ ಎಂಬ ಕಾರಣ ನೀಡಿ ಚಿಕಿತ್ಸೆಗೆ ನಿರಾಕರಿದರೆ ಕ್ರಮಕೈಗೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದರೂ ಯಾವ ಆಸ್ಪತ್ರೆಗಳೂ ಡೋಂಟ್ ಕೇರ್ ಎನ್ನುತ್ತಿವೆ.
ರಾಮನಗರದಲ್ಲಿ 7 ತಿಂಗಳ ಮಗು ಬಲಿ..!
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 7 ತಿಂಗಳ ಮಗುವೊಂದು ಆಸ್ಪತ್ರೆಗಳ ನಿರ್ಲಕ್ಷ್ಯದಿಂದ ಬಲಿಯಾಗಿರುವ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.
ರಾಮನಗರ ಜಿಲ್ಲೆ ಚನ್ನಪಟ್ಟಣದ ಪೇಟೆಚೇರಿ ನಿವಾಸಿ ಪ್ರದೀಪ್ ಮತ್ತು ನಂದಿನಿ ದಂಪತಿಯ 7 ತಿಂಗಳ ಹೆಣ್ಣು ಮಗುವಿಗೆ ಇಂದು ಬೆಳಿಗ್ಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ. ಕೂಡಲೇ ತಾಯಿ ಮತ್ತು ಅಜ್ಜಿ ಮಗುವನ್ನು ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಮಕ್ಕಳ ವೈದ್ಯರಿಲ್ಲ, ಬೇರೆ ಕಡೆ ಕರೆದುಕೊಂಡು ಹೋಗಿ ಎಂದು ವಾಪಸ್ ಕಳಿಸಿದ್ದಾರೆ.
ಅಲ್ಲಿಂದ ಮಕ್ಕಳ ತಜ್ಞರೊಬ್ಬರ ಬಳಿ ಕರೆದೊಯ್ದರೆ ಅವರು ಇನ್ನೊಂದು ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿ ಸಾಗ ಹಾಕಿದ್ದಾರೆ. ಅಲ್ಲಿಂದ ಬಿ.ಜಿ ಲಿಂಗೇಗೌಡ ಆಸ್ಪತ್ರೆಗೆ ಮಗುವನ್ನು ಕರೆತಂದಾಗ ಮಗು ಸತ್ತಿರುವುದಾಗಿ ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ತಾಯಿ ಮತ್ತು ಅಜ್ಜಿ ಮತ್ತೆ ಸರ್ಕಾರಿ ಆಸ್ಪತ್ರೆಗೆ ಹೋಗಿದ್ದಾರೆ. ಅಲ್ಲಿಯೂ ಮಗು ಬದುಕಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಮಗುವಿಗೆ ಚಿಕಿತ್ಸೆ ಕೊಡಿಸಲು ಸುಮಾರು ಐದು ಆಸ್ಪತ್ರೆಗಳಿಗೆ ತಿರುಗಿದ್ದೇವೆ. ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿಸಿದ್ದರಿಂದಲೇ ನಮ್ಮ ಮಗು ಸತ್ತಿದೆ. ಮೊದಲೇ ಚಿಕಿತ್ಸೆ ಕೊಟ್ಟಿದ್ದರೆ ನಮ್ಮ ಮಗು ಬದುಕಿ ಉಳಿಯುತ್ತಿತ್ತು ಎಂದು ಮಗುವಿನ ತಂದೆ ಪ್ರದೀಪ್ ಕಣ್ಣೀರಿಟ್ಟಿದ್ದಾರೆ.
ಜನರ ಪ್ರಾಣ ಅದರಲ್ಲೂ ಪುಟ್ಟ ಮಕ್ಕಳ ಪ್ರಾಣದ ಜತೆ ಚೆಲ್ಲಾಟವಾಡುವ ಆಸ್ಪತ್ರೆಗಳಿಗೆ ಯಾವಾಗ ಕಡಿವಾಣ ಬೀಳುವುದು ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರ ನೀಡಬೇಕಿದೆ.








