ಖ್ಯಾತ ಧಾರ್ಮಿಕ ವ್ಯಕ್ತಿ ಹಾಗೂ ಸಾಮಾಜಿಕ ಮುಖಂಡ ಆನಂದ ಗುರೂಜಿಗೆ ಜೀವ ಬೆದರಿಕೆ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಚಿಕ್ಕಜಾಲ ಪೊಲೀಸ್ ಠಾಣೆಗೆ ಅವರು ನೀಡಿದ ದೂರಿನ ಆಧಾರದಲ್ಲಿ ಬ್ಲ್ಯಾಕ್ ಮೇಲ್ ಹಾಗೂ ಜೀವ ಬೆದರಿಕೆ ಪ್ರಕರಣ ದಾಖಲಾಗಿದ್ದು, ಈ ಸಂಬಂಧ ಕೃಷ್ಣಮೂರ್ತಿ ಮತ್ತು ದಿವ್ಯಾ ವಸಂತ್ ಎಂಬವರ ವಿರುದ್ಧ FIR ದಾಖಲಾಗಿದೆ.
ದೂರು ಏನು ಹೇಳುತ್ತದೆ?
ಆನಂದ ಗುರೂಜಿ ತಮ್ಮ ಕಾರನ್ನು ಅಡ್ಡಗಟ್ಟಿ, ಹಣಕ್ಕಾಗಿ ಬೆದರಿಕೆ ಮತ್ತು ಬ್ಲ್ಯಾಕ್ ಮೇಲ್ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಘಟನೆಯು ಅವರ ವೀಡಿಯೋ ವಿವಾದ ಹಾಗೂ ಜಮೀನು ಖರೀದಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಕೋರ್ಟ್‌ನಿಂದ ತಡೆಯಾಜ್ಞೆ ಕೂಡಾ ಪಡೆದಿದ್ದಾರೆಂದು ಅವರು ತಿಳಿಸಿದ್ದಾರೆ.
ಆದರೂ ಸಹ ಆರೋಪಿಗಳು, ಹಣ ಪಡೆಯಲು ಗುರೂಜಿಗೆ ನೇರವಾಗಿ ಮಾನಸಿಕ ಒತ್ತಡ, ಬೆದರಿಕೆ ಹಾಗೂ ಅಪಮಾನಕರ ರೀತಿಯಲ್ಲಿ ಬೆದರಿಕೆ ಹಾಕಿದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಪೊಲೀಸರ ಪ್ರತಿಕ್ರಿಯೆ:
ಚಿಕ್ಕಜಾಲ ಠಾಣೆ ಪೊಲೀಸರು ಈಗಾಗಲೇ FIR ದಾಖಲಿಸಿಕೊಂಡು, ಪ್ರಾಥಮಿಕ ತನಿಖೆ ಆರಂಭ ಮಾಡಿದ್ದಾರೆ. ಆರೋಪಿಗಳನ್ನು ವಿಚಾರಣೆಗಾಗಿ ಸಮನ್ಸ್ ಜಾರಿಗೊಳಿಸುವ ಕಾರ್ಯ ಪ್ರಾರಂಭವಾಗಿದೆ. ಪ್ರಕರಣದ ಎಲ್ಲಾ ವಿಡಿಯೋ ದಾಖಲೆಗಳು, ದೂರುದಾರನ ಹೇಳಿಕೆ ಹಾಗೂ ಹಿನ್ನಲೆಯಲ್ಲಿ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ.
ಹಿನ್ನೆಲೆಯ ವಿವಾದಗಳು:
ಆನಂದ ಗುರೂಜಿ ಇತ್ತೀಚೆಗೆ ಕೆಲವು ಜಮೀನು ವಿವಾದ ಹಾಗೂ ವಿಡಿಯೋ ವೈರಲ್ ಪ್ರಕರಣಗಳಲ್ಲಿ ಸುದ್ದಿಯಾಗಿದ್ದರು. ಈ ಎಲ್ಲಾ ವಿಚಾರಗಳಲ್ಲಿ ಅವರು ಕಾನೂನಾತ್ಮಕ ರಕ್ಷಣೆ ಪಡೆದುಕೊಂಡಿದ್ದರೂ, ಅವರ ಮೇಲಿನ ದಬ್ಬಾಳಿಕೆಯನ್ನು ಕಡಿಮೆ ಮಾಡಿಲ್ಲ ಎಂಬುದು ಈ ಹೊಸ ದೂರಿನಿಂದ ಸ್ಪಷ್ಟವಾಗಿದೆ.








