ಗದಗ: ಸಾಲಬಾಧೆ ತಾಳಲಾರದೆ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಈ ಘಟನೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಹಿರೇಮಣ ವ್ಯಾಪ್ತಿಯಲ್ಲಿ ನಡೆದಿದೆ. ಶಂಕ್ರಣ್ಣ ಗೋಡಿ(54) ಆತ್ಮಹತ್ಯೆ ಮಾಡಿಕೊಂಡ ರೈತ. ಇವರು ಕೈಗಡ ಹಾಗೂ ಬ್ಯಾಂಕ್ ನಲ್ಲಿ ಸಾಲ ಮಾಡಿದ್ದರು ಎನ್ನಲಾಗಿದೆ.
ಟ್ರ್ಯಾಕ್ಟರ್ ಖರೀದಿ, ಬೆಳೆ ಸಾಲ, ಆಸ್ಪತ್ರೆ ವೆಚ್ಚ ಎಂದು ಹಲವು ಬ್ಯಾಂಕ್ ಗಳಲ್ಲಿ ಸುಮಾರು 10 ಲಕ್ಷ ರೂ. ಸಾಲ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ, ಸಮರ್ಪಕ ಬೆಳೆ ಬಾರದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸಾಲದ ಬಡ್ಡಿ ಹೆಚ್ಚಾಗುತ್ತಿತ್ತು. ಇತ್ತ ಐದು ಎಕರೆಯಲ್ಲಿ ಬೆಳೆದಿದ್ದ ಹೆಸರು, ಹತ್ತಿ, ಶೇಂಗಾ, ಮೆಣಸಿನಕಾಯಿ ಬೆಳೆ ಅತಿವೃಷ್ಟಿಯಿಂದ ನಾಶವಾಗಿತ್ತು. ಇದರಿಂದ ಬ್ಯಾಂಕ್ ಸಾಲ, ಬೆಳೆ ನಷ್ಟದಿಂದ ಮನನೊಂದು ಜಮೀನಿನಲ್ಲಿನ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಕುರಿತು ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.