ಚಿಕ್ಕಮಗಳೂರು: ರಾಜ್ಯದಲ್ಲಿ ಹೆಮ್ಮಾರಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ 2020ರ ವರ್ಷ ಜೀವ ಉಳಿಸುವ ವರ್ಷವಾಗಿದೆ. ಹೀಗಾಗಿ ಈ ವರ್ಷವನ್ನು ಪರೀಕ್ಷೆ ಇಲ್ಲದ ವರ್ಷವೆಂದು ಘೋಷಣೆ ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶೋಭಾ, ಮೊದಲು ಜೀವ ಉಳಿಸೋಣ. ನಂತರ ಜೀವನ. ಸದ್ಯಕ್ಕೆ ಯಾವುದೇ ಕಾರಣಕ್ಕೂ ಶಾಲೆಗಳನ್ನು ಆರಂಭಿಸುವುದು ಬೇಡ. ಆನ್‍ಲೈನ್‍ನಲ್ಲಿ ತರಗತಿಗಳನ್ನು ಮುಂದುವರೆಸುವುದಕ್ಕೆ ನನ್ನ ಅಭ್ಯಂತರವಿಲ್ಲ ಎಂದಿದ್ದಾರೆ.
ದೇಶಾದ್ಯಂತ ಶಿಕ್ಷಕರ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಶಿಕ್ಷಕರು ದೇಶದ ಆಸ್ತಿ, ಶಿಕ್ಷಕರ ಜೀವದ ಬಗ್ಗೆಯೂ ಸರ್ಕಾರ ಕಾಳಜಿ ವಹಿಸಬೇಕು. ಪೋಷಕರು ಸಹ ಮಕ್ಕಳನ್ನು ಶಾಲೆಗೆ ಕಳಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ಮಕ್ಕಳನ್ನು ಕೊರೊನಾ ಕೂಪಕ್ಕೆ ತಳ್ಳುವುದು ಬೇಡ. ಹೀಗಾಗಿ ಪ್ರಸಕ್ತ ಶೈಕ್ಷಣಿಕ ವರ್ಷ ಶಾಲೆರಹಿತ ವರ್ಷವೆಂದು ಘೋಷಿಸುವಂತೆ ಸಲಹೆ ನೀಡಿದ್ದಾರೆ.