ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಆಯುಷ್ ಇಲಾಖೆ ಸೂಚಿಸಿರುವ ಕಷಾಯ ಮಾಡುವ ವಿಧಾನ
ಮಂಗಳೂರು, ಜುಲೈ 19: ದೇಶದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿದ್ದರೂ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಕೊರೊನಾ ಸೋಂಕನ್ನು ಎದುರಿಸಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್ ಧರಿಸುವುದು ಮುಂತಾದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವ ಜೊತೆಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ ಸೇವಿಸುವುದು ಅಗತ್ಯ. ಈ ನಿಟ್ಟಿನಲ್ಲಿ ರಾಜ್ಯ ಆಯುಷ್ ಇಲಾಖೆ ಸೂಚಿಸಿರುವ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕಷಾಯವನ್ನು ಸಿದ್ಧ ಪಡಿಸುವ ವಿಧಾನವನ್ನು ಇಲ್ಲಿ ಕೊಡಲಾಗಿದೆ.

ಕಷಾಯವನ್ನು ಸಿದ್ಧಪಡಿಸುವ ವಿಧಾನ :
ನಾಲ್ಕು ಭಾಗ ಒಣಗಿದ ತುಳಸಿ ಎಲೆ, 2 ಭಾಗ ದಾಲ್ಚಿನ್ನಿ (ಚಕ್ಕೆ), 2 ಭಾಗದಷ್ಟು ಒಣಗಿದ ಶುಂಠಿ ಹಾಗೂ 1 ಭಾಗದಷ್ಟು ಕಾಳುಮೆಣಸು ತೆಗೆದುಕೊಂಡು ಚೆನ್ನಾಗಿ ಹುಡಿ ಮಾಡಿ ಗಾಜಿನ ಬಾಟಲಿಯಲ್ಲಿ ಶೇಖರಿಸಿಟ್ಟುಕೊಳ್ಳಿ.
150 ಮಿಲಿ ನೀರಿಗೆ 1/4 ಚಮಚದಷ್ಟು ಈ ಕಷಾಯದ ಹುಡಿಯನ್ನು ಬೆರೆಸಿ 5 ರಿಂದ 10 ನಿಮಿಷ ಕುದಿಸಿ. ಬಳಿಕ ಸೋಸಿ ಪ್ರತಿ ದಿನ 1 ಬಾರಿ ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಇದರ ಜೊತೆಗೆ ಬೇಕಾದರೆ ಬೆಲ್ಲ, ನಿಂಬೆರಸ ಅಥವಾ ಒಣದ್ರಾಕ್ಷಿ ಬೆರೆಸಿಕೊಳ್ಳಬಹುದಾಗಿದೆ.








