Delhi budget : 2023 -24 ನೇ ಸಾಲಿನ 78,800 ಕೋಟಿ ಬಜೆಟ್ ಮಂಡಿಸಿದ ಆಪ್ ಸರ್ಕಾರ…
ಕೇಂದ್ರ ಸರ್ಕಾರದೊಂದಿಗೆ ಸಂಘರ್ಷದ ನಡುವೆಯೂ ದೆಹಲಿಯ ಆಮ್ ಆದ್ಮಿ ಸರಕಾರ 2023-24ನೇ ಹಣಕಾಸು ವರ್ಷ ಬಜೆಟ್ ಅನ್ನ ಮಂಡಿಸಿದೆ. ದೆಹಲಿ ವಿಧಾನಸಭೆಯಲ್ಲಿ ಹಣಕಾಸು ಸಚಿವ ಕೈಲಾಶ್ ಗಹ್ಲೋಟ್ ಬುಧವಾರ 78,800 ಕೋಟಿ ಬಜೆಟ್ ಮಂಡಿಸಿದರು.
ದೆಹಲಿ ಸರ್ಕಾರದ 2022-23 ರ ಬಜೆಟ್ ಗಾತ್ರ ರೂ 75,800 ಕೋಟಿ. ಹಿಂದಿನ ವರ್ಷದಲ್ಲಿ ರೂ 69,000 ಕೋಟಿ ಇತ್ತು. ಇದು ಎಎಪಿ ಸರ್ಕಾರದ ಒಂಬತ್ತನೇ ಸತತ ಬಜೆಟ್ ಆಗಿದೆ.
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸಿಬಿಐನಿಂದ ಬಂಧಿಸಲ್ಪಟ್ಟು ರಾಜೀನಾಮೆ ನೀಡಿದ ನಂತರ ಹಣಕಾಸು ಇಲಾಖೆಯ ಜವಬ್ದಾರಿಯನ್ನ ಕೈಲಾಶ್ ಗೆಹ್ಲೋಟ್ ಅವರು ವಹಿಸಿಕೊಂಡಿದ್ದು ಇದೇ ಮೊದಲ ಬಾರಿಗೆ ಬಜೆಟ್ ಮಂಡಿಸಿದ್ದಾರೆ.
“ನನ್ನ ಹಿರಿಯ ಸಹೋದರನಂತಿರುವ ಮನೀಶ್ ಸಿಸೋಡಿಯಾ ಅವರು ಈ ಬಜೆಟ್ ಅನ್ನು ಮಂಡಿಸಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತಿತ್ತು. ಬಜೆಟ್ ಜನರ ನಿರೀಕ್ಷೆಗಳು ಮತ್ತು ಆಕಾಂಕ್ಷೆಗಳ ಅಭಿವ್ಯಕ್ತಿಯಾಗಿದೆ” ಎಂದು ಗಹ್ಲೋಟ್ ತಮ್ಮ ಬಜೆಟ್ ಭಾಷಣದಲ್ಲಿ ಹೇಳಿದರು.
ಮುಂದಿನ 10 ವರ್ಷಗಳಲ್ಲಿ 1,400 ಕಿಲೋಮೀಟರ್ ರಸ್ತೆಗಳ ಮೇಲ್ದರ್ಜೆಗೆ 19,466 ಕೋಟಿ ರೂಗಳೊಂದಿಗೆ ಸ್ವಚ್ಛ, ಸುಂದರ ಮತ್ತು ಆಧುನಿಕ ದೆಹಲಿಗೆ ಬಜೆಟ್ ಅನ್ನು ಮೀಸಲಿಡಲಾಗಿದೆ ಎಂದು ಸಚಿವರು ಹೇಳಿದರು. ಸರ್ಕಾರವು 2023-24ಕ್ಕೆ ವಿವಿಧ ಮೂಲಸೌಕರ್ಯ ಯೋಜನೆಗಳಿಗೆ 2,034 ಕೋಟಿ ರೂ ಮೀಸಲಿಡಲಾಗಿದೆ.
2023-24ರ ಆರ್ಥಿಕ ವರ್ಷದಲ್ಲಿ ಸ್ಥಳೀಯ ಸಂಸ್ಥೆಗಳಿಗೆ 8,241 ಕೋಟಿ ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಅವರು ಘೋಷಿಸಿದರು. “ದಿಲ್ಲಿಯ ಮೂರು ಪರ್ವತಗಳ ಕಸವನ್ನ ತೆಗೆದುಹಾಕಲು ಎಂಸಿಡಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು. ನಾವು ಎಲ್ಲಾ ಕಾಲೋನಿಗಳನ್ನ ಒಳಚರಂಡಿ ಜಾಲಕ್ಕೆ ಸಂಪರ್ಕಿಸುತ್ತೇವೆ. ಯಮುನಾ ನದಿಯನ್ನ ಸ್ವಚ್ಛಗೊಳಿಸಲು ಒಳಚರಂಡಿ ಸಂಸ್ಕರಣಾ ಘಟಕಗಳ ಸಾಮರ್ಥ್ಯವನ್ನ ಹೆಚ್ಚಿಸುತ್ತೇವೆ” ಎಂದು ಅವರು ಹೇಳಿದರು.
Delhi budget: AAP government presented 78,800 crore budget for 2023-24…