ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುಖ್ಯ ಕೋಚ್ (Delhi Capitals Head Coach) ಆಗಿ ಹೇಮಂಗ್ ಬದಾನಿ (Hemang Badani) ಹಾಗೂ ಕ್ರಿಕೆಟ್ ನಿರ್ದೇಶಕರಾಗಿ ವೇಣುಗೋಪಾಲ್ ರಾವ್ ನೇಮಕವಾಗಿದ್ದಾರೆ.
ಈ ಕುರಿತು ತಂಡ ಅಧಿಕೃತವಾಗಿ ಘೋಷಿಸಿದೆ. 7 ಆವೃತ್ತಿ ನಡೆದರೂ ಐಪಿಎಲ್ ಟ್ರೋಫಿ (IPL Trophy) ತಂದುಕೊಡುವಲ್ಲಿ ರಿಕಿ ಪಾಟಿಂಗ್ (Ricky Ponting) ವಿಫಲರಾಗಿದ್ದಕ್ಕೆ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಈ ಬೆನ್ನಲ್ಲೇ ಮುಖ್ಯಕೋಚ್ ಹುದ್ದೆಗೆ ಸೌರವ್ ಗಂಗೂಲಿ ಅವರ ಹೆಸರು ಕೇಳಿ ಬಂದಿತ್ತು. ಆದ್ರೆ ಡೆಲ್ಲಿ ಕ್ಯಾಪಿಲಟ್ಸ್ ಫ್ರಾಂಚೈಸಿ ಅಚ್ಚರಿ ಎನ್ನುವಂತೆ ಹೇಮಂಗ್ ಬದಾನಿ ಅವರನ್ನು ಆಯ್ಕೆ ಮಾಡಿದೆ. ಸೌರವ್ ಗಂಗೂಲಿ ಅವರ ಬದಲಿಗೆ ಕ್ರಿಕೆಟ್ ನಿರ್ದೇಶಕರನ್ನಾಗಿ ವೇಣುಗೋಪಾಲ್ ರಾವ್ ಅವರನ್ನ ನೇಮಿಸಿದೆ.
47 ವರ್ಷದ ಹೇಮಂಗ್ ಬದಾನಿ ಭಾರತದ ಪರ 4 ಟೆಸ್ಟ್ ಹಾಗೂ 40 ಏಕದಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. 2021-23 ರವರೆಗೆ ಸನ್ರೈಸರ್ಸ್ ಹೈದರಾಬಾದ್ ತಂಡದ ಫೀಲ್ಡಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್ ನಲ್ಲಿ ಜಾಫ್ನಾ ಕಿಂಗ್ಸ್ ಫ್ರಾಂಚೈಸಿ ಕೋಚ್ ಆಗಿ ಬ್ಯಾಕ್ ಟು ಬ್ಯಾಕ್ 2 ಪ್ರಶಸ್ತಿ ಗೆದ್ದಿದ್ದರು.
ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಬದಾನಿ, ದೆಹಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಸೇರುತ್ತಿರುವುದು ನನಗೆ ಹೆಮ್ಮೆ ಎನಿಸಿದೆ. ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕಾಗಿ ನಮ್ಮ ಮಾಲೀಕರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ ಎಂದಿದ್ದಾರೆ.