ಬೆಂಗಳೂರು: ದುಷ್ಟ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದು ನಿಲ್ಲಬೇಕು ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ (Democracy Day) ಅಂಗವಾಗಿ ಚಾರಿತ್ರಿಕ ಮಾನವ ಸರಪಳಿ ಚಳವಳಿಯನ್ನು ವಿಧಾನಸೌಧದ ಗ್ರಾಂಡ್ ಸ್ಟೆಪ್ಸ್‌ನಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಸಂವಿಧಾನ ಎತ್ತಿ ಹಿಡಿದಿರುವ ಬಹುತ್ವವನ್ನು ನಾವು ಬದುಕಿನಲ್ಲಿ ಆಚರಿಸೋಣ. ಸಮಾಜ ಒಡೆಯುವ ದುಷ್ಟರ ಷಡ್ಯಂತ್ರ ಸೋಲಿಸೋಣ.
ಪ್ರಜಾಪ್ರಭುತ್ವ ಗಟ್ಟಿಗೊಳಿಸಬೇಕಿದೆ. ಬುದ್ದ, ಬಸವಣ್ಣನ ಕಾಲದಲ್ಲೇ ನಮ್ಮಲ್ಲಿ ಪ್ರಜಾಪ್ರಭುತ್ವ, ಸಂಸದೀಯ ವ್ಯವಸ್ಥೆ ಇತ್ತು. ಆರ್ಥಿಕ-ಸಾಮಾಜಿಕ ಪ್ರಜಾಪ್ರಭುತ್ವ ಎಲ್ಲರಿಗೂ ಸಿಕ್ಕಾಗ ಮಾತ್ರ ರಾಜಕೀಯ ಸ್ವಾತಂತ್ರಕ್ಕೆ ಅರ್ಥ ಬರುತ್ತದೆ ಎಂದು ಹೇಳಿದ್ದಾರೆ.
ರಾಷ್ಟ್ರಗೀತೆ ಮತ್ತು ನಮ್ಮ ನಾಡಗೀತೆಯಲ್ಲಿರುವ ಭಾರತ ಮತ್ತು ಕರ್ನಾಟಕ ನಮ್ಮದಾಗಬೇಕು. ಯಾವುದೇ ತಾರತಮ್ಯ ಇಲ್ಲದ ಶಾಂತಿಯ ತೋಟ ನಮ್ಮದಾಗಬೇಕು. ಸಮಾಜದಲ್ಲಿರುವ ಅಸಮಾನತೆ ತೊಡೆದು ಹಾಕುವವರೆಗೂ ದೇಶಕ್ಕೆ ಸಿಕ್ಕ ಸ್ವಾತಂತ್ರ್ಯಕ್ಕೆ ಅರ್ಥ ಇರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಏಕತೆ ನೆಪದಲ್ಲಿ ಸಮಾಜವನ್ನು ಒಡೆಯುವ ವಿಚ್ಚಿದ್ರಕಾರಕ ಶಕ್ತಿಗಳನ್ನು ನಾಶ ಮಾಡಲು ಪ್ರಜಾಪ್ರಭುತ್ವವಾದಿಗಳು ಎದ್ದುನಿಲ್ಲಬೇಕು ಎಂದು ಕರೆ ಕೊಟ್ಟಿದ್ದಾರೆ.