ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ (Chief Secretary) ಶಾಲಿನಿ ರಜನೀಶ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಹಿನ್ನೆಲೆ, ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ಸಂಬಂಧ ಕಾಂಗ್ರೆಸ್ ನಾಯಕರ ನೇತೃತ್ವದ ನಿಯೋಗ ಸಭಾಪತಿಗೆ ದೂರು ಸಲ್ಲಿಸಿ, ತ್ವರಿತ ಕ್ರಮಕ್ಕೆ ಒತ್ತಾಯಿಸಿದೆ.
KPCC ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದ ನಿಯೋಗ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರನ್ನು ಭೇಟಿಯಾಗಿ ದೂರು ಸಲ್ಲಿಸಿದೆ. ಈ ವೇಳೆ ಅವರು, ಎಂಎಲ್ಸಿ ಸ್ಥಾನದಿಂದ ರವಿಕುಮಾರ್ ಅವರನ್ನು ವಜಾ ಮಾಡಬೇಕು. ಅವರು ಹೆಣ್ಣುಮಕ್ಕಳ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದು ಮಹಿಳಾ ಸಬಲೀಕರಣ ಹಾಗೂ ಗೌರವಕ್ಕೆ ಧಕ್ಕೆ ತರುವ ವ್ಯಾಖ್ಯಾನವಾಗಿದೆ, ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿ ಎನ್. ರವಿಕುಮಾರ್ ಈ ಹಿಂದೆ ರಾಜ್ಯದ ಹಲವು ಜಿಲ್ಲಾಧಿಕಾರಿಗಳ ವಿರುದ್ಧವೂ ಅಪಮಾನಕಾರಿ ಭಾಷೆ ಬಳಕೆ ಮಾಡಿರುವ ದಾಖಲೆಗಳಿವೆ ಎಂದು ಅವರು ಆರೋಪಿಸಿದ್ದಾರೆ.
ಸರ್ಕಾರದ ಹಿರಿಯ ಅಧಿಕಾರಿಗಳ ಮೇಲೆ ನಿರ್ಲಜ್ಜವಾಗಿ ಮಾತನಾಡುವ ರಾಜಕೀಯ ಸಂಸ್ಕೃತಿಗೆ ತಡೆ ನೀಡಬೇಕು. ಮುಖ್ಯ ಕಾರ್ಯದರ್ಶಿಯವರ ವಿರುದ್ಧ ಈ ರೀತಿಯ ಹೇಳಿಕೆಗಳು ಅಧಿಕಾರಿಗಳ ನೈತಿಕ ಉತ್ಸಾಹವನ್ನು ಕುಗ್ಗಿಸುವಂತಿವೆ ಎಂದು ಮನೋಹರ್ ಮತ್ತು ಅವರ ತಂಡ ಸಭಾಪತಿಗೆ ಮನವಿ ಮಾಡಿದ್ದಾರೆ.
ಈ ದೂರು ರಾಜ್ಯ ರಾಜಕೀಯದಲ್ಲಿ ಮತ್ತೊಂದು ಬಿಸಿ ವಿಚಾರವಾಗಿ ಪರಿಣಮಿಸಿದ್ದು, ವಿಧಾನ ಪರಿಷತ್‌ನಲ್ಲಿ ಈ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ. ಇದೀಗ ಸಭಾಪತಿಯು ಏನೆಲ್ಲಾ ಕ್ರಮ ಕೈಗೊಳ್ಳುತ್ತಾರೆ ಎಂಬುದರತ್ತ ಎಲ್ಲರ ದೃಷ್ಟಿ ಇದೆ.








