ರಾಜ್ಯದಲ್ಲಿ 135 ಸೀಟುಗಳ ಭರ್ಜರಿ ಗೆಲುವು ಒದಗಿಸಿದರೂ ಕೂಡ ಸುಸ್ಥಿರ ಸರ್ಕಾರ ನೀಡಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಿಲ್ಲ ಎಂದು ಬಿಜೆಪಿಯ ಹಿರಿಯ ನಾಯಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಆರ್. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರು ವಿಶ್ವಾಸವಿಟ್ಟು 135 ಸೀಟುಗಳನ್ನು ನೀಡಿದ್ದರು. ಆದರೂ, ಸುಸ್ಥಿರ ಸರ್ಕಾರ ಕೊಡಲಾಗದ ಕಾಂಗ್ರೆಸ್‌ಗೆ, ರಾಹುಲ್ ಗಾಂಧಿಗೆ ನಾಚಿಕೆಯಾಗಬೇಕು ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಐದು ವರ್ಷ ನಾನು ಸಿಎಂ ಆಗಿರುತ್ತೇನೆ ಎಂದು ನೀಡಿರುವ ಹೇಳಿಕೆಯನ್ನು ಉಲ್ಲೇಖಿಸಿದ ಅಶೋಕ್, ಇದರಿಂದಲೇ ಡಿಕೆ ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲ ಎಂಬ ನೇರ ಸಂದೇಶ ಹೋಗಿದೆ. ಆದರೆ ಡಿಕೆಶಿ ಅಥವಾ ಮಲ್ಲಿಕಾರ್ಜುನ ಖರ್ಗೆ ಅವರಿಬ್ಬರೂ ಇದನ್ನು ಸಮರ್ಥಿಸಿರುವ ಹಾಗೆ ಇಲ್ಲ ಎಂದಿದ್ದಾರೆ.
ಡಿಕೆಶಿ ಅಥವಾ ಖರ್ಗೆ ಅವರು ಬಹಿರಂಗವಾಗಿ ‘ಹೌದು, ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗುತ್ತಾರೆ’ ಎಂದು ಹೇಳಿದರೆ ಸಾಕು. ಯಾರಾದರೂ ಖರ್ಗೆ, ಡಿಕೆಶಿಯವರಿಂದ ಒಂದೇ ಒಂದು ಹೇಳಿಕೆ ಕೊಡಿಸಿ ನೋಡೋಣ ಎಂದು ಸವಾಲು ಹಾಕಿದ್ದಾರೆ.
ಅಶೋಕ್ ಅವರ ಅಭಿಪ್ರಾಯದಲ್ಲಿ, ರಾಜ್ಯದಲ್ಲಿ ನಾಯಕತ್ವದ ಗೊಂದಲ, ಸಚಿವ ಸ್ಥಾನಕ್ಕೆ ಆಕಾಂಕ್ಷೆ, ಶಾಸಕರ ಅಸಮಾಧಾನ – ಇವೆಲ್ಲವೂ ಸುಸ್ಥಿರ ಆಡಳಿತಕ್ಕೆ ಹೊಡೆತ ನೀಡುತ್ತಿವೆ. ಇಂತಹ ಸರ್ಕಾರದಿಂದ ಜನತೆಗೆ ಏನು ಹಿತ? ಎಂದು ಪ್ರಶ್ನಿಸಿದ ಅವರು, ಮುಂದಿನ ದಿನಗಳಲ್ಲಿ ಜನರ ತೀರ್ಪು ಕಾಂಗ್ರೆಸ್‌ಗೆ ಕಠಿಣವಾಗಲಿದೆ ಎಂದು ಎಚ್ಚರಿಸಿದರು.








