ದೇವರಾಜ ಅರಸು ಎಜುಕೇಶನಲ್ ಟ್ರಸ್ಟ್ ಸಾರ್ವಜನಿಕರ ಆಸ್ತಿ ಕುಟುಂಬದ ಟ್ರಸ್ಟ್ ಅಲ್ಲ
ಕೋಲಾರ : ದೇವರಾಜ ಅರಸು ಟ್ರಸ್ಟ್ ದಿ.ಆರ್.ಎಲ್.ಜಾಲಪ್ಪ ಅವರ ಆಶಯ ಹಾಗೂ ಆಶೋತ್ತರಗಳಂತೆ ನಡೆಯುತ್ತಿದ್ದು, ಜಾಲಪ್ಪನವರ ಕುಟುಂಬಸ್ಥರಿಗೆ ಇದರಲ್ಲಿ ಹಕ್ಕಿಲ್ಲ. ಟ್ರಸ್ಟ್ ಬೈಲಾದಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಟ್ರಸ್ಟ್ ಅಧ್ಯಕ್ಷ R ಆಡಳಿತಾಧಿಕಾರಿ ಜಿ.ಎಚ್.ನಾಗರಾಜ್ ಅವರು ಸ್ಪಷ್ಟಪಡಿಸಿದ್ದಾರೆ.
ಸಂಸ್ಥೆಯ ಮೇಲೆ ಹಕ್ಕು ಸಾಧಿಸಲು ಕುಟುಂಬಸ್ಥರು ಸೋಮವಾರ ನಡೆಸಿದ ಗದ್ದಲ ಸಂಬಂಧ ಟ್ರಸ್ಟಿಗಳೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು. ಇದು ಕುಟುಂಬದ ಟ್ರಸ್ಟ್ ಅಲ್ಲ. ಸಾರ್ವಜನಿಕರ ಟ್ರಸ್ಟ್ ಆಗಿದ್ದು. ಜಾಲಪ್ಪನವರು ನಿಧನ ಹೊಂದುವ ಮೊದಲು ತಮ್ಮ ಕುಟುಂಬದವರು ಯಾರಿರಬೇಕು ಎಂಬುದನ್ನು ನಿರ್ಧರಿಸಿದ್ದರು ಎಂದರು.
ಟ್ರಸ್ಟ್ ವಿಚಾರಕ್ಕೆ ಸಂಬಂಧಿಸಿದಂತೆ ನೀಡಲಾಗಿರುವ ಸೀಲಿಂಗ್ ಲೆಟರ್ನಲ್ಲಿ ಜಾಲಪ್ಪನವರು ತಮ್ಮ ಪುತ್ರ ರಾಜೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಈ ಹಿಂದಿನ ಸಭೆಯಲ್ಲಿ ಜಾಲಪ್ಪನವರ ಮೊಮ್ಮಗ ಅರವಿಂದ್ ಅವರೇ ಅಧ್ಯಕ್ಷರ ಹೆಸರನ್ನು ಅನುಮೋದಿಸಿದ್ದರು. ಸದ್ಯ ಜಾಲಪ್ಪನವರ ಪುತ್ರ ರಾಜೇಂದ್ರ ಅವರೇ ಟ್ರಸ್ಟ್ ನ ಉಪಾಧ್ಯಕ್ಷರಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈಗಿನ ಟ್ರಸ್ಟ್ ಯಾವುದೇ ಕಾನೂನು ಬಾಹಿರ ಕೆಲಸ ಮಾಡುತ್ತಿಲ್ಲ. ಇದರ ಹಿಂದೆ ರಾಜಕೀಯ ಪಿತೂರಿ ಇರಬಹುದು. ಉತ್ತಮ ಬಾಂದವ್ಯ ಇದ್ದ ಕುಟುಂಬವನ್ನು ಒಡೆದಿದ್ದರ ಹಿಂದೆ ಷಡ್ಯಂತ್ರ ನಡೆಯುತ್ತಿದೆ. ಬಹಿರಂಗವಾಗಿ ಹೇಳಿದರೆ ಕೆಲವರಿಗೆ ನೋವಾಗಬಹುದು. ಆಡಳಿತ ಪಕ್ಷದ ಬಹುತೇಕರು ಇದರ ಹಿಂದೆ ಇದ್ದಾರೆ ಅನ್ನುವುದನ್ನು ಹೇಳಿದ್ದೇನೆ ಎಂದರು.
ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಟ್ರಸ್ಟಿಯಾಗಿದ್ದವರು. ಅವರು ನಮ್ಮ ಜೊತೆ ಮಾತಾಡಿದ್ದಾರೆ . ಹೊಸ ಸಮಿತಿಯಲ್ಲಿ ರಾಜೇಂದ್ರ ಅವರ ಹೆಸರಿದೆ. ಈಗ ನಮ್ಮ ಮೇಲೆ ಮಾಡಲಾಗುತ್ತಿರುವ ಯಾವುದೇ ಆರೋಪಕ್ಕೆ ಹುರುಳಿಲ್ಲ. ಜಾಲಪ್ಪನವರದ್ದು ನನ್ನದು 50 ವರ್ಷದ ಬಾಂದವ್ಯ. ನನ್ನ ಮನೆ ಮೇಲೆ ಮೂರು ಬಾರಿ ರೈಡ್ ಹಾಗೂ ಸಂಸ್ಥೆಯ ಮೇಲೂ ಎರಡು ಬಾರಿ ರೈಡ್ ಮಾಡಲಾಗಿದೆ. ಈ ವಿಚಾರದಲ್ಲಿ ನಮಗೆ ಕ್ಲೀನ್ ಚಿಟ್ ಸಿಕ್ಕಿದೆ. ಸಂಸ್ಥೆಯಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ . ಸಾರ್ವಜನಿಕ ಟ್ರಸ್ಟ್ ಆಗಿರುವ ಕಾರಣ ಕುಟುಂಬದ ಹಸ್ತಕ್ಷೇಪದ ವಿಚಾರವೇ ಬರುವುದಿಲ್ಲ. ಬೈಲಾ ಪ್ರಕಾರ ಏನು ಇದೆಯೋ ಅದನ್ನೇ ಕಾರ್ಯಗತ ಗೊಳಿಸಲಾಗಿದೆ ಎಂದರು.
ಆರ್. ಎಲ್. ಜಾಲಪ್ಪನವರು ಯಾವುದೇ ಮಕ್ಕಳನ್ನೂ ಹತ್ತಿರ ಸೇರಿಸುತ್ತಿರಲಿಲ್ಲ. ರಾಜಕೀಯವಾಗಿಯೂ ಹಾಗೂ , ಕಾನೂನುಬದ್ಧವಾಗಿಯೂ ವಿಚಾರ ಎದುರಿಸಲು ಸಿದ್ಧ. ಟ್ರಸ್ಟ್ ಗೆ ಬೈಲಾ ನಿಯಮವೇ ಅಂತಿಮ ಎಂದರು.