ಯಡಿಯೂರಪ್ಪ ಸಿಎಂ ಆದಾಗಿನಿಂದ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ : ಕಾರಜೋಳ
ಧಾರವಾಡ : ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದಾಗಿನಿಂದಲೂ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ ಎಂದು ಡಿಸಿಎಂ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಿಎಂ ಆದಾಗಿನಿಂದ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ.
ಆದರೂ ಜನರ ನೆರವಿಗೆ ಬರುವುದಕ್ಕಾಗಿ 1250 ಕೋಟಿ ಪ್ಯಾಕೇಜ್ ನೀಡಿದ್ದಾರೆ. ದುಡಿಯುವ ವರ್ಗಕ್ಕೆ ಇದು ವಿಶೇಷವಾದ ಪ್ಯಾಕೇಜ್. ಕಳೆದ ವರ್ಷ 2,200 ಕೋಟಿ ಕೊಟ್ಟಿದ್ವಿ.
ಈ ಸಲ ಅರ್ಥಿಕ ಸಂಕಷ್ಟದ ನಡುವೆಯೂ ಕೊಟ್ಟಿದ್ದೇವೆ. ನಾವು ಹೆಚ್ಚು ಕೊಟ್ಟಿದ್ದೇವೆ ಅಂತಾ ಈಗ ಹೇಳಿಕೊಳ್ಳುವ ಪರಿಸ್ಥಿತಿ ಇಲ್ಲ. ಆದರೆ ಈ ಸಂದರ್ಭದಲ್ಲಿ ನೆರವಿಗೆ ಬಂದಿದ್ದು ಬಹಳ ವಿಶೇಷ ಎಂದು ನಿನ್ನೆ ಸಿಎಂ ಘೋಷಿಸಿದ್ದ ವಿಶೇಷ ಪ್ಯಾಕೇಜ್ ಅನ್ನು ಸಮರ್ಥಿಸಿಕೊಂಡರು.
ಇದೇ ವೇಳೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಮಾತನಾಡಿ, ನಿತ್ಯದ ಸಾವು ನೋವಿನ ಸಂಖ್ಯೆ ನೋಡಿದಾಗ ಹಳ್ಳಿಗಳಿಗೆ ಕೊರೊನಾ ಹಬ್ಬಿದೆ. ಬಿಗಿಯಾದ ಲಾಕ್ ಡೌನ್ ಅವಶ್ಯಕತೆ ಇದೆ ಎಂದು ಮತ್ತೆ ಲಾಕ್ ಡೌನ್ ವಿಸ್ತರಣೆ ಬಗ್ಗೆ ಸುಳಿವು ನೀಡಿದರು.
ಬಳಿಕ ಕಾಂಗ್ರೆಸ್ ಕಿಟ್ ಹಂಚಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ಒಳ್ಳೆಯದು ಯಾರೇ ಮಾಡಿದರೂ ನಾವು ಸ್ವಾಗತಿಸಿಕೊಳ್ಳುತ್ತೇವೆ. ಸರ್ಕಾರ ಎಲ್ಲಿಯೂ ವಿಫಲವಾಗಿಲ್ಲ.
ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿದಾಗಿನಿಂದಲೇ ಸಂಕಷ್ಟಗಳ ಸರಮಾಲೆ ಎದುರಾಗಿದೆ. ಪ್ರವಾಹ ಬಂತು, ಕೊರೊನಾ ಬಂತು.
ಮತ್ತೇ ಪ್ರವಾಹ ಬಂತು ಕರೊನಾನೂ ಮತ್ತೇ ಬಂತು. ಎರಡು ವರ್ಷದ ಅವಧಿಯಲ್ಲಿ ಸರ್ಕಾರಕ್ಕೆ 60 ಸಾವಿರ ಕೋಟಿಯಷ್ಟು ಹಾನಿಯಾಗಿದೆ ಎಂದರು.