ಚೆನ್ನೈ: 2025ರ ಐಪಿಎಲ್ ನಲ್ಲಿಯೂ ಧೋನಿ ಕಾಣಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದ್ದು, ಅಭಿಮಾನಿಗಳು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಆವೃತ್ತಿಯ ಮೆಗಾ ಹರಾಜಿನತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಮೂರು ವರ್ಷಗಳ ನಂತರ ಬಲಿಷ್ಠ ಆಟಗಾರರು ಯಾವ ತಂಡ ಸೇರಲಿದ್ದಾರೆ ಎಂಬ ಕುತೂಹಲ ಈಗ ಎಲ್ಲರದ್ದಾಗಿದೆ. ಈ ಮಧ್ಯೆ 2025ರ ಐಪಿಎಲ್ ನಲ್ಲಿ ಎಂ.ಎಸ್ ಧೋನಿ (MS Dhoni) ಕಣಕ್ಕಿಳಿಯುವ ಕುರಿತು ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಸುಳಿವು ನೀಡಿದ್ದಾರೆ.
ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ (Ruturaj Gaikwad), ಮಹಿ ಮತ್ತೊಂದು ಆವೃತ್ತಿಗೆ ಚೆನ್ನೈ ತಂಡದ ಕೈ ಹಿಡಿಯಬೇಕೆಂದು ಬಯಸಿದ್ದಾರೆ. ರುತುರಾಜ್‌ಗೆ ಇನ್ನಷ್ಟು ನಾಯಕತ್ವದ ಗುಣಗಳನ್ನು ಕಲಿಸಬೇಕಿದೆ ಆದ್ದರಿಂದ ಧೋನಿ ಮುಂದಿನ ಆವೃತ್ತಿಯಲ್ಲೂ ಸಿಎಸ್‌ಕೆ ತಂಡದ ಪರ ಆಡಲಿದ್ದಾರೆ ಎಂದು ಹೇಳಿದ್ದಾರೆ.
ಯಾವುದೇ ರಾಷ್ಟ್ರೀಯ ತಂಡದ ಆಟಗಾರರು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿ 5 ವರ್ಷ ಮುಕ್ತಾಯಗೊಂಡು, ಐಪಿಎಲ್‌ನಲ್ಲಿ ಭಾಗವಹಿಸಿದರೆ, ಅವರನ್ನ ಅನ್‌ಕ್ಯಾಪ್ಡ್ ಪ್ಲೇಯರ್ (ಹೊಸಬರು) ಅಂತ ಪರಿಗಣಿಸಲಾಗುತ್ತದೆ. ಧೋನಿ ವಿದಾಯ ಹೇಳಿ 2025ರ ಆಗಸ್ಟ್ 15ಕೆ 5 ವರ್ಷ ಪೂರ್ಣಗೊಳ್ಳಲಿದೆ. ಪ್ರಸ್ತುತ ಒಂದು ಆವೃತ್ತಿಗೆ 12 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಅನ್‌ಕ್ಯಾಪ್ಡ್ ಪ್ಲೇಯರ್ ಆಗಿ ಪರಿಗಣಿಸಿದರೆ, ಸುಮಾರು 4 ಕೋಟಿ ರೂ. ಸಂಭಾವನೆ ಸಿಗಬಹುದು.