ಕೆಪಿಸಿಸಿ ಅಧ್ಯಕ್ಷ ನೇಮಕ ವಿಚಾರ: ದಿನೇಶ್ ಗುಂಡೂರಾವ್-ಸೋನಿಯಾ ಗಾಂಧಿ ಭೇಟಿ
ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರೆಸಿದರೂ ಆಶ್ಚರ್ಯವಿಲ್ಲ
ತೆರೆಮರೆಯಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್
ಬೆಂಗಳೂರು: ದೆಹಲಿ ಚುನಾವಣೆ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರವಾಗಿ ಇಷ್ಟು ದಿನ ಮೌನವಾಗಿದ್ದ ಕಾಂಗ್ರೆಸ್ ಹೈಕಮಾಂಡ್ ಇದೀಗ ಮತ್ತೆ ನೇಮಕಾತಿಗೆ ಸಂಬಂಧಪಟ್ಟಂತೆ ಪ್ರಕ್ರಿಯೆಗಳನ್ನು ಆರಂಭಿಸಿದೆ. ಕಾಂಗ್ರೆಸ್ ವರಿಷ್ಠರು ಹಂತ ಹಂತವಾಗಿ ರಾಜ್ಯದ ನಾಯಕರುಗಳನ್ನು ಭೇಟಿ ಮಾಡುತ್ತಿದ್ದಾರೆ. ಇಂದು ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನಿನ್ನೆ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸೋನಿಯಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಭಕ್ತ ಚರಣದಾಸ್ ಮತ್ತು ಮಧುಸೂದನ ಮಿಸ್ತ್ರಿ ವರದಿಯನ್ನು ಅನುಷ್ಠಾನಕ್ಕೆ ತರಬೇಕೆಂದು ಒತ್ತಡ ಹೇರಿದರು. ಆ ವರದಿಯ ಪ್ರಕಾರ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಸಿದ್ದರಾಮಯ್ಯನವರಲ್ಲಿಯೇ ಉಳಿಸಿ, ಶಾಸಕಾಂಗ ಪಕ್ಷದ ನಾಯಕ ಸ್ಥಾನದಿಂದ ಬೇರ್ಪಡಿಸಿ, ಈ ಸ್ಥಾನವನ್ನು ಬೇರೆ ನಾಯಕರಿಗೆ ನೀಡಬೇಕೆಂಬ ವಿಷಯ ಪ್ರಸ್ತಾಪಿಸಲಾಗಿದೆ. ಆದರೆ ಈ ರೀತಿ ಸ್ಥಾನಗಳನ್ನು ಬೇರ್ಪಡಿಸಲು ಸಿದ್ದರಾಮಯ್ಯ ಮತ್ತು ಅವರ ತಂಡ ಬಲವಾದ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ಇಕ್ಕಟ್ಟಿಗೆ ಸಿಲುಕಿದ್ದು, ರಾಜ್ಯ ನಾಯಕರ ಜೊತೆ ಸಮಾಲೋಚನೆಗೆ ಮುಂದಾಗಿದೆ.
ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾದ ಡಿ.ಕೆ.ಶಿವಕುಮಾರ್ ಅವರು ತೆರೆಮರೆಯಲ್ಲಿ ತೀವ್ರ ಲಾಬಿ ನಡೆಸುತ್ತಿದ್ದಾರೆ. ಕಾನೂನಿನ ತೊಡಕುಗಳ ಬಗ್ಗೆ ಆತಂಕಗೊಂಡಿರುವ ಕಾಂಗ್ರೆಸ್ ಸದ್ಯಕ್ಕೆ ದಿನೇಶ್ ಗುಂಡೂರಾವ್ ಅವರನ್ನೇ ಮುಂದುವರೆಸಿದರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಕೇಳಿಬಂದಿವೆ.ಒಟ್ಟಿನಲ್ಲಿ ಇಂದು ದಿನೇಶ್ ಗುಂಡೂರಾವ್ ಅವರ ವರಿಷ್ಠರ ಭೇಟಿ ಯಾವ ರೀತಿಯ ಫಲ ನೀಡಲಿವೆ ಎಂದು ಕಾದುನೋಡಬೇಕಾಗಿದೆ.