ರಾಜ್ಯದ ಏಕಮಾತ್ರ ಸಾಮೂಹಿಕ ಆತ್ಮಬಲಿ ಶಿಲ್ಪ ಪತ್ತೆಯಾಗಿದ್ದು ಬಿದನೂರಿನ ಪರಿಸರದಲ್ಲಿ; ಆತ್ಮಬಲಿ ಶಿಲ್ಪಗಳ ಅಧ್ಯಯನದಲ್ಲಿ ಹೊಸ ತಿರುವು: Saakshatv Naavu kelada charitre episode12
ಪಶ್ಚಿಮ ಘಟ್ಟದ ಮಲೆನಾಡಿನ ತಪ್ಪಲಿನಲ್ಲಿ ಇರುವ “ಬಿದನೂರು” 1639 ಇಂದ 1763ರ ವರೆಗೆ ಇಕ್ಕೇರಿ ನಾಯಕರ ಕೊನೆಯ ರಾಜಧಾನಿಯಾಗಿ ಸಮಸ್ತ ದೇಶ ಮತ್ತು ವಿದೇಶದಲ್ಲಿ ವಿಜೃಂಭಿಸುತ್ತದೆ. ಅಂದಿನ ಕಾಲದಲ್ಲಿ ಮಲೆನಾಡು ಮತ್ತು ಕರಾವಳಿಯನ್ನು ಆಳಿದ ಇಕ್ಕೇರಿ ನಾಯಕರು “ಬಿದನೂರನ್ನು” ಒಂದು ಶಕ್ತಿ ಕೇಂದ್ರವನ್ನಾಗಿ ಪರಿವರ್ತಿಸಿದರು. ಬಿದನೂರಿನ ಪರಿಸರದಲ್ಲಿ ಅಂದು ಸಂಚರಿಸಿದ ಅದೆಷ್ಟೋ ಪ್ರವಾಸಿಗರು (ವಿದೇಶಿಯರ ಸಹಿತ) ಇಲ್ಲಿಯ ಹೆದ್ದಾರಿ, ಧೂಪದ ಮರಗಳ ಸಾಲು, ರಸ್ತೆ ಬದಿಯ ದೀಪದ ಕಂಬಗಳು, ಸ್ಮಾರಕಗಳು, ಮಠ ಮತ್ತು ದೇವಾಲಯಗಳು, ಪುಷ್ಕರಣಿಗಳು, ಕಾರ್ಖಾನೆಗಳು, ಗಣಿಗಾರಿಕೆ, ನಗರ ವಿನ್ಯಾಸ ಮತ್ತು ಸುರಕ್ಷತಾ ಕ್ರಮಗಳು, ಕಾರಂಜಿಗಳು, ಉದ್ಯಾನವನಗಳು, ಕೃಷಿ, ಹೀಗೆ ಹತ್ತು ಹಲವಾರು ಕ್ಷೇತ್ರಗಳ ಬಗ್ಗೆ ವಿಸ್ತಾರವಾದ ತಮ್ಮ ಅನಿಸಿಕೆಗಳನ್ನು ದಾಖಲಿಸಿದ್ದಾರೆ. Saakshatv Naavu kelada charitre episode12

1671 ಇಂದ 1696ರ ವರೆಗೂ ಇಕ್ಕೇರಿ ರಾಜ್ಯವನ್ನು ಸಮರ್ಥವಾಗಿ ಆಳಿದ ರಾಣಿ ಚೆನ್ನಮ್ಮಾಜಿ ಬಿದನೂರಿನ ಪರಿಸರದಲ್ಲಿ ಒಂದು ಅದ್ಭುತವಾದ ಕಾರಂಜಿ, ಉದ್ಯಾನವನ, ಅಡಿಕೆ ತೋಟ, ದೇವಾಲಯ ಮತ್ತು ಅರಮನೆಯನ್ನು ಕಟ್ಟಿಸುತ್ತಾಳೆ. ಬಿದನೂರಿನ ಎರಡನೇ ಸುತ್ತಿನ ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಇರುವ “ಬಸವನ ಬ್ಯಾಣ” ದ್ವಾರದ ಮುಖಾಂತರ ಮುಂದೆ ಸಾಗಿ ಈ ರಮಣೀಯ ಪ್ರದೇಶವನ್ನು ಅಂದಿನ ರಾಜಮನೆತನದ ಸದಸ್ಯರು ಮುಟ್ಟುತ್ತಿದ್ದರು. ಇಲ್ಲಿಯ ಪುಷ್ಕರಣಿ ಮತ್ತು ನೈಸರ್ಗಿಕವಾಗಿ ಚಿಮ್ಮುತ್ತಿದ ನೀರಿನ ಕಾರಂಜಿಗಳು ಇಕ್ಕೇರಿ ನಾಯಕರ ತಂತ್ರಜ್ಞಾನದ ಕೈಗನ್ನಡಿಯಾಗಿತ್ತು. ಇಲ್ಲಿಗೆ ಬೇಟಿ ನೀಡಿದ ಉನ್ನತ ಬ್ರಿಟೀಷ್ ಅಧಿಕಾರಿಗಳು, ದಿವಾನ್ ಪುರ್ಣಯ್ಯ, ಸರ್ ಎಮ್ ವಿಶ್ವೇಶ್ವರಯ್ಯ, ಮೈಸೂರಿನ ಮಹಾರಾಜರು ಈ ಕಾರಂಜಿಯನ್ನು ನೋಡಿ ಮಂತ್ರಮುಗ್ಥರಾಗಿದ್ದರು. ಇಲ್ಲಿಯ ಕಾರಂಜಿ ಮತ್ತು ಉದ್ಯಾನವನದಿಂದ ಸ್ಪೂರ್ತಿ ಪಡೆದು ಮೈಸೂರಿನಲ್ಲಿ ನಿರ್ಮಾಣವಾದ ಉದ್ಯಾನವನವೇ ಬೃಂದಾವನ.

ಅಂದಿನ ಕಾಲದಲ್ಲಿ ರಾಜ ಪರಿವಾರದವರು ಇಲ್ಲಿಗೆ ಆಗಮಿಸಿ ಜಲಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುತ್ತಿದ್ದರು ಹಾಗಾಗಿ ಸ್ವಾಭಾವಿಕವಾಗಿ ಅಂದಿನ ಕಾಲದಲ್ಲಿ ರಾಣಿ ಚೆನ್ನಮ್ಮಾಜಿ ಈ ಕೊಳಗಳ ಹತ್ತಿರದಲ್ಲಿ ಒಂದು ಭವ್ಯ ಅರಮನೆಯನ್ನು ಕಟ್ಟಿಸುತ್ತಾಳೆ, ಅದಕ್ಕೆ ಇಟ್ಟ ಹೆಸರು “ರಾಣಿ ಮಹಲ್”. ಮೂರು ಎಕರೆ ವಿಸ್ತೀರ್ಣದಲ್ಲಿ ಕಟ್ಟಿಸಿದ ಈ ಭವ್ಯ ಓಡು ಹಂಚಿನ ಅದ್ಭುತವಾದ ಮರದ ಕೆತ್ತನೆ ಇರುವ ಭವಂತಿ ಅರಮನೆಗೆ 1807ರಲ್ಲಿ ಭೇಟಿ ನೀಡಿದ ಬ್ರಿಟೀಷ್ ಅಧಿಕಾರಿ “ಕೋಲಿನ ಮೆಕೆಂಜಿ” ಈ ಅರಮನೆಯ ವಿನ್ಯಾಸದ ಬಗ್ಗೆ, ಪುಷ್ಕರಣಿ ಮತ್ತು ಕಾರಂಜಿಗೆ ನೀರು ಒದಗಿಸುವ ಕೆರೆ, ಕೆರೆಯಿಂದ ಕೊಳಗಳಿಗೆ ನೀರು ಸರಬರಾಜು ಮಾಡುವ ನಾಲೆ, ಅರಸರ ಅಡಿಕೆ ತೋಟ, ಬಿದನೂರಿನಿಂದ ರಾಜ ಪರಿವಾರದವರು ಅರಮನೆಗೆ ಬರುವ ರಸ್ತೆ ಮಾರ್ಗ, ರಸ್ತೆ ಮದ್ಯದಲ್ಲಿ ಇರುವ ಸುರಕ್ಷತಾ ಕಟ್ಟಡಗಳ ಬಗ್ಗೆ ವಿಸ್ತಾರವಾಗಿ ದಾಖಲಿಸಿದ್ದಾರೆ (ಇಂದು ಈ ಎಲ್ಲಾ ಮಾಹಿತಿ ಲಂಡನ್ ಬ್ರಿಟೀಷ್ ಸಂಗ್ರಹಾಲಯದಲ್ಲಿ ಸೆರೆಯಾಗಿದೆ).
ಈ ದಾಖಲೆಗಳನ್ನು ಹೊತ್ತು ಈ ರಾಣಿ ಮಹಲ್ ಅನ್ನು ಹುಡುಕಲು ಪ್ರಾರಂಭಿಸಿದಾಗ ನಮಗೆ ಹಲವಾರು ಸಂಗತಿಗಳು ಬೆಳಕಿಗೆ ಬಂದವು. ನನ್ನ ಈ ರಾಣಿ ಮಹಲ್ ಹುಡುಕಾಟ, ಅದರ ಉತ್ಖನನ ಮತ್ತು ಅದರ ಪರಿಸರದ ಬಗ್ಗೆ ವಿಸ್ತೃತವಾಗಿ ನನ್ನ ಮುಂಬರುವ ಪುಸ್ತಕ “ಬಿದನೂರು – ಮರೆತು ಹೋದ ಭವ್ಯವಾದ ನಗರ” (Bidanooru – the forgotten magnificent city) ದಲ್ಲಿ ನೀಡಲಾಗುವುದು. ಇನ್ನೂ ಈ ವಿಶ್ವವಿಖ್ಯಾತ ದೇವಗಂಗೆ ಕೊಳಕ್ಕೆ ನೀರು ಒದಗಿಸುವ ಕರೆಯ ಸುತ್ತಲಿನ ಪರಿಸರವನ್ನು ಪರಿಶೀಲಿಸುವಾಗ ಈ ಕೆರೆಗೆ ಗುಡ್ಡಗಳಿಂದ ಹರಿದು ಬರುವ ನೀರಿನ ಮೂಲವನ್ನು ಹುಡುಕಲು ಮುಂದಾದೆ. ಈ ಹುಡುಕಾಟ ನಿಜಕ್ಕೂ ನನ್ನ ಪಾಲಿಗೆ ಒಂದು ಹೊಸ ಸಂಚಲನವನ್ನು ಸೃಷ್ಟಿಸಿತು ಏಕೆಂದರೆ ದಟ್ಟವಾದ ಕಾಡಿನಲ್ಲಿ ಇರುವ ಒಂದು ಸಣ್ಣ ಜಲಪಾತದ ತಟ್ಟತುದಿಯಲ್ಲಿ ಕಾಣಿಸುತ್ತದೆ ಒಂದು ಅದ್ಭುತವಾದ ಅನನ್ಯ ಶಿಲ್ಪ. ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲೂ ಸಿಗದ ಏಕಮಾತ್ರ “ಸಾಮೂಹಿಕ ಆತ್ಮಬಲಿ” ಶಿಲ್ಪ ನನಗೆ ಮತ್ತು ನನ್ನ ತಂಡಕ್ಕೆ ನಿಬ್ಬೆರಗಾಗುವಂತೆ ಮಾಡಿತು. ನಮ್ಮ ರಾಜ್ಯ ಮತ್ತು ಇತರೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಲವಾರು ಆತ್ಮಬಲಿ ಶಿಲ್ಪಗಳು ಸಿಕ್ಕಿದ್ದರು ಸಹಾ ಸಾಮೂಹಿಕ ಆತ್ಮಬಲಿ ಶಿಲ್ಪ ಇಲ್ಲಿಯವರೆಗೆ ಬಹುಶಃ ಎಲ್ಲಿಯೂ ದೊರೆತಿಲ್ಲ. ಇನ್ನೂ ಈ ಸಾಮೂಹಿಕ ಆತ್ಮಬಲಿ ಕಾರ್ಯದಲ್ಲಿ ಮಕ್ಕಳು ಮತ್ತು ಒಂದು ಅಂಬೆಗಾಲು ಇಡುವ ಹಸುಗೂಸು ಇರುವುದು ಇನ್ನೊಂದು ವಿಶೇಷ ಸಂಗತಿ.

ಬಿದನೂರಿನ ವಾಯುವ್ಯ ಭಾಗದಲ್ಲಿ ಇರುವ ದೇವಗಂಗೆ ಕೊಳ ಮತ್ತು ರಾಣಿ ಮಹಲ್ ಸಂಕೀರ್ಣಕ್ಕೆ ನೀರನ್ನು ಸರಬರಾಜು ಮಾಡುವ ಕೆರೆಯ ಉತ್ತರಕ್ಕೆ ಇರುವ ಗುಡ್ಡವನ್ನು ಹತ್ತಿ ಕಾಡಿನಲ್ಲಿ ಸಾಗಿದಾಗ ಕಿರುಗುಲಿಗೆ ಇಂದ ಬರುವ ಒಂದು ಸಣ್ಣ ಹಳ್ಳ ಮತ್ತು ಬ್ರಾಹ್ಮಣತರುವೆ ಇಂದ ಬರುವ ಇನ್ನೊಂದು ಹಳ್ಳದ ನೀರಿನ ಸಂಗಮ ಸ್ಥಳ ಸಿಗುತ್ತದೆ. ಈ ಬ್ರಾಹ್ಮಣತರುವೆ ಇಂದ ಬರುವ ನೀರಿನ ಹಳ್ಳದ ಪಕ್ಕದಲ್ಲಿ ಸಾಗಿದಾಗ ಒಂದು ಸಣ್ಣ ಜಲಪಾತ ಕಾಣಿಸುತ್ತದೆ (ಮಳೆಗಾಲದಲ್ಲಿ ಇದನ್ನು ನೋಡಲು ಸುಂದರವಾಗಿರುತ್ತದೆ). ಈ ಜಲಪಾತದ ಮೇಲ್ಭಾಗದಲ್ಲಿ ನಾಗನ ಕಲ್ಲಿನ ಪಕ್ಕದಲ್ಲಿ ಇರುವ ಶಿಲ್ಪವೇ “ಸಾಮೂಹಿಕ ಆತ್ಮಬಲಿ” ಶಿಲ್ಪ. ಈ ಶಿಲ್ಪದಲ್ಲಿ ಕೇವಲ ಒಂದೇ ಫಲಕ ಇದ್ದು ಇದರ ಮೇಲ್ಭಾಗದಲ್ಲಿ ಸೂರ್ಯ ಮತ್ತು ಚಂದ್ರ ಕಾಣಿಸುತ್ತದೆ. ಶಿಲ್ಪದ ಕೆಳಭಾಗದಲ್ಲಿ (ಎಡ ಇಂದ ಬಲಕ್ಕೆ) ಒಂದು ಸ್ತ್ರೀ ತನ್ನ ಎಡಕ್ಕೆ ಒಂದು ಮಗುವಿನ ಜೊತೆಗೆ ನಿಂತಿದ್ದು, ಈ ಮಗು ತನ್ನ ಎರಡು ಕೈಗಳನ್ನು ತನ್ನ ಶಿರದ ಮೇಲೆ ಜೋಡಿಸಿ ನಮಸ್ಕರಿಸುತ್ತಿದೆ. ಮುಂದೆ ಒಬ್ಬ ಮನುಷ್ಯ (ಗಂಡು) ತನ್ನ ಎಡಗೈಯಲ್ಲಿ “ಆತ್ಮವನ್ನು” ಎತ್ತಿ ಹಿಡಿದ್ದಿದ್ದು ಇದು ಆತ್ಮಬಲಿದಾನದ ಸಂಕೇತವಾಗಿದೆ. ಇನ್ನೂ ಈ ಶಿಲ್ಪದ ಮಧ್ಯದಲ್ಲಿ ಇರುವ ಕೇಂದ್ರ ವಿಷಯ ಒಂದು ಮಹಿಳೆ, ಇವಳು ತನ್ನ ಮಡಲಿನಲ್ಲಿ ಒಂದು ಹಸುಗೂಸನ್ನು ಹಿಡಿದುಕೊಂಡಿದ್ದು ತನ್ನ ಎಡಕ್ಕೆ ಮತ್ತೆರಡು ಮಕ್ಕಳು ನಿಂತಿರುವುದು ಗೋಚರಿಸುತ್ತದೆ. ಈ ಶಿಲ್ಪದ ಬಲಭಾಗದ ಕೊನೆಯಲ್ಲಿ ಮತ್ತೆ ಒಬ್ಬ ವ್ಯಕ್ತಿ (ಗಂಡು) ತನ್ನ ಬಲಗೈಯಲ್ಲಿ ಆತ್ಮವನ್ನು” ಎತ್ತಿ ಹಿಡಿದ್ದಿದ್ದಾನೆ. ಒಟ್ಟಾರೆ ಈ ಸಾಮೂಹಿಕ ಆತ್ಮಬಲಿ ಶಿಲ್ಪದಲ್ಲಿ ಎರಡು ಮಹಿಳೆಯರು, ಎರಡು ಪುರುಷರು ಮತ್ತು ನಾಲ್ಕು ಮಕ್ಕಳನ್ನು (ಒಂದು ಹಸುಗೂಸು ಸಮೇತವಾಗಿ) ಕಾಣಬಹುದು.

ಡಾ ಜಗದೀಶ್ ಅಗಸಿಬಾಗಿಲು (ಶಾಸನ ತಜ್ಞರು), ಡಾ ಡಿ. ವಿ. ಪರಮಶಿವಮೂರ್ತಿ (ಇತಿಹಾಸ ತಜ್ಞರು – ತುಮಕೂರು ವಿಶ್ವವಿದ್ಯಾಲಯ) ಮತ್ತು ಡಾ ಶಾಂತರಾಮ ಸಾಮಕ್ (ಪುರಾತತ್ವ ತಜ್ಞರು) ಇವರುಗಳ ಅಭಿಪ್ರಾಯದಲ್ಲಿ ಇದೊಂದು ವಿಶೇಷ ಸಾಮೂಹಿಕ ಆತ್ಮಬಲಿ ಶಿಲ್ಪವಾಗಿದ್ದು ಇಂತಹ ಶಿಲ್ಪ ಇಲ್ಲಿಯವರೆಗೂ ಎಲ್ಲಿಯೂ ದೊರೆತ್ತಿರುವುದಿಲ್ಲ. ಈ ಶಿಲ್ಪವು 15ನೇ ಶತಮಾನದ ಕೊನೆಯ ಕಾಲಘಟ್ಟಕ್ಕೆ ಸೇರಿದ್ದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ನಮ್ಮ ಇತಿಹಾಸದ ಪುಟಗಳನ್ನು ಒಮ್ಮೆ ಮೆಲುಕು ಹಾಕಿದರೆ ಆತ್ಮಬಲಿಯನ್ನು ಎರಡು ಹಂತಗಳಲ್ಲಿ ಗುರುತಿಸ ಬಹುದು – (1) ಧಾರ್ಮಿಕ ಕಾರಣಗಳಿಗಾಗಿ ಆತ್ಮಬಲಿ ಮಾಡಿಕೊಂಡವರು ಮತ್ತು (2) ಸಾಮಾಜಿಕ ಕಾರಣಗಳಿಗಾಗಿ ಆತ್ಮಬಲಿ ಮಾಡಿಕೊಂಡವರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಆತ್ಮಹತ್ಯೆ ಬೇರೆ, ಆತ್ಮಬಲಿ ಬೇರೆ. ಧಾರ್ಮಿಕ ಕಾರಣಗಳಿಗಾಗಿ ಆತ್ಮಬಲಿ ಮಾಡಿಕೊಂಡವರು ಯಾವುದೇ ಹೋರಾಟದಲ್ಲಿ ಮಡಿದವರಲ್ಲ, ಆದರೆ ಇವರು ಹೋರಾಟದಲ್ಲಿ ಮಡಿದ ವೀರರಿಗಿಂತ ಕಡಿಮೆ ಎಂದು ಸಮಾಜ ಭಾವಿಸಿರಲಿಲ್ಲ. ನಿರ್ದಿಷ್ಟ ಉದ್ದೇಶಕ್ಕೆ, ನಿರ್ದಿಷ್ಟ ಸ್ಥಳ ಮತ್ತು ಕಾಲದಲ್ಲಿ ತಮ್ಮನ್ನು ತಾವೇ, ಕೆಲವೊಮ್ಮೆ ಬೇರೆಯವರಿಂದಲೂ ದೇಹವನ್ನು ಬಲಿಕೊಟ್ಟು, ತಮ್ಮನ್ನು ತಾವೇ ದೇವರಿಗೆ ನೈವೇದ್ಯ ಮಾಡಿಕೊಂಡವರು ಇವರು. ಈ ರೀತಿ ಆತ್ಮಾರ್ಪಣೆ ಮಾಡುವುದರ ಮೂಲಕ ತಮಗೂ, ತಮ್ಮ ರಾಜನಿಗೂ, ತಮ್ಮ ಕುಟುಂಬಕ್ಕೆ, ದೇಶಕ್ಕೆ ಶ್ರೇಯಸ್ಸು ಉಂಟಾಗುತ್ತದೆ ಎಂಬ ನಂಬಿಕೆ ಅವರದಾಗಿತ್ತು. ಈ ನಂಬಿಕೆ ಸಂಪೂರ್ಣವಾಗಿ ಧಾರ್ಮಿಕವಾದುದಾಗಿತ್ತು. ಇನ್ನೂ ಸಾಮಾಜಿಕ ಕಾರಣಗಳಿಗಾಗಿ ಆತ್ಮಬಲಿ ಮಾಡಿಕೊಂಡವರು ಬಹುತೇಕ ತಮಗೆ ಆಶ್ರಯ ನೀಡಿದ ಅರಸರು ಅಥವಾ ವ್ಯಕ್ತಿಗಳು ಯಾವುದೇ ಕಾರಣಕ್ಕಾಗಿ ದಿವಂಗತರಾದರೂ ಅವರೊಂದಿಗೆ ಸತ್ತವರು.

ಡಾ ಆರ್ ಶೇಷಶಾಸ್ತ್ರಿಗಳ ಅಭಿಪ್ರಾಯದಲ್ಲಿ ಸತ್ತ ವ್ಯಕ್ತಿಯು ಪರಲೋಕಕ್ಕೆ ಹೋದಾಗ ಅವನಿಗೆ ಇಹಲೋಕದಲ್ಲಿದ್ದಂತೆ ಪರದಲ್ಲಿಯೂ ಹೆಂಡತಿಯರು, ಸೇವಕರು ಮುಂತಾದ ಸಕಲ ಸೌಲಭ್ಯವೂ ದೊರೆಯಬೇಕು ಎಂಬ ನಂಬುಗೆಯಿಂದ ಸತ್ತ ವ್ಯಕ್ತಿಯೊಂದಿಗೆ ಇವರೆಲ್ಲರೂ ಪ್ರಾಣತ್ಯಾಗ ಮಾಡಿಕೊಳ್ಳುತ್ತಿದ್ದರು. ಈ ಒಂದು ಪದ್ಧತಿಯನ್ನು ಪ್ರಪಂಚದ ಎಲ್ಲೆಡೆ ಕಾಣಬಹುದು. ಇನ್ನೂ ಜೈನಧರ್ಮದಲ್ಲಿ ಧಾರ್ಮಿಕ ಆತ್ಮಬಲಿ ಮಾಡಿಕೊಂಡ ಜೈನಯತಿಗಳನ್ನು ನಮ್ಮ ಜನ ಮತ್ತು ಸಮಾಜ ಎಂದೂ ‘ವೀರ’ ರೆಂದಾಗಲೀ ಅಥವಾ ಅವರ ಆ ಕೃತ್ಯವನ್ನು ವೀರತನದ ಕಾರ್ಯವೆಂದಾಗಲೀ ಭಾವಿಸಿಲ್ಲ. ಇದಕ್ಕೆ ಬಲವಾದ ಕಾರಣವೆಂದರೆ ಅವರು ಸಾಯುವ ಗತಿಯು ನಿಧಾನವಾಗಿತ್ತು, ಉಗ್ರವಾದ ಹಿಂಸೆಯಿಂದಾಗಲೀ ರಕ್ತಪಾತದಿಂದ ಕೂಡಿರರಿಲ್ಲ.

ಬಿದನೂರಿನ ಪರಿಸರದಲ್ಲಿ ಸಿಕ್ಕ ಈ ಅನನ್ಯ ಮತ್ತು ವಿಶೇಷ ಸಾಮೂಹಿಕ ಆತ್ಮಬಲಿ ಶಿಲ್ಪ ಮತ್ತು ಸ್ಥಳ ತುಂಬಾನೇ ಕೌತುಕವಾಗಿದೆ. ಈ ಶಿಲ್ಪದಲ್ಲಿ ಕಾಣಸಿಗುವ ವೀರರು ಯಾವ ಕಾರಣಕ್ಕಾಗಿ ಸಾಮೂಹಿಕ ಆತ್ಮಬಲಿ ಮಾಡಿಕೊಂಡರು, ಇದು ಧಾರ್ಮಿಕ ಅಥವಾ ಸಾಮಾಜಿಕ ಕಾರಣಗಳಿಗಾಗಿ ಮಾಡಿಕೊಂಡ ಆತ್ಮಬಲಿಯೇ, ಇವರುಗಳು ಯಾವ ರೀತಿಯಲ್ಲಿ ಆತ್ಮಬಲಿ ಮಾಡಿಕೊಂಡರು, ಹೀಗೆ ಹತ್ತು ಹಲವಾರು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಕ್ಷೇತ್ರ ಕಾರ್ಯಚರಣೆ ಮಾಡ ಬೇಕಾಗಿದೆ. ಏನೇ ಇರಲಿ ಇಂತಹ ಏಕಮಾತ್ರ ಶಿಲ್ಪ ನಮ್ಮ ಬಿದನೂರಿನ ಪರಿಸರದಲ್ಲಿ ಸಿಕ್ಕಿದ್ದು ನಮ್ಮ ಪುಣ್ಯವೇ ಸರಿ, ನಮ್ಮ ಪರಂಪರೆ, ಸಂಸ್ಕೃತಿ ಮತ್ತು ಭವ್ಯ ಇತಿಹಾಸವನ್ನು ಸಾರುವ ಜೀವಂತ ಮಾದ್ಯಮವೇ ಈ ಶಿಲ್ಪಗಳು.
-ಲೇಖನ ಮತ್ತು ಫೋಟೋಗಳು
ಅಜಯ್ ಕುಮಾರ್ ಶರ್ಮಾ
ಇತಿಹಾಸ ಸಂಶೋಧಕ, ಅಧ್ಯಯನಕಾರ ಮತ್ತು ಪರಿಸರ ಹೋರಾಟಗಾರರು
ನಾವು ಕೇಳದ ಚರಿತ್ರೆ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








