ಚಾಮರಾಜನಗರದ ರಥದ ಬೀದಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದ್ದ ಗಣಪತಿಯನ್ನು ಸೋಮವಾರ ಸಂಜೆ ಸಾರ್ವಜನಿಕರ ಸಮ್ಮುಖದಲ್ಲಿ ಪೂಜೆ ಕೈಂಕಾರ್ಯಗಳಿಂದ ಭಕ್ತಿ ಪೂರ್ವಕವಾಗಿ ವಿಸರ್ಜನೆ ಮಾಡಲಾಯಿತು.
ಹಲವಾರು ವರ್ವಗಳಿಂದ ಚಾಮರಾಜನಗರ ಪಟ್ಟಣದಲ್ಲಿ ಶ್ರೀ ವಿದ್ಯಾಗಣಪತಿ ಮಂಡಲಿಯವರು ಪ್ರತಿಷ್ಠಾಪನೆ ಮಾಡಿ, ಹಲವಾರು ದಿನಗಳ ಕಾಲ ಪೂಜೆ ಮಾಡಿ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು.
ಈ ಬಾರಿಯ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಗಣಪತಿ ಪ್ರತಿಷ್ಠಾಪನೆ ಮಾಡಿ ಮೂರೇ ದಿನಕ್ಕೆ ವಿಸರ್ಜನೆ ಮಾಡಿದ್ದು ಇದೇ ಮೊದಲು ಎನ್ನಲಾಗಿದೆ.
ಭಾನುವಾರ ವಿದ್ಯಾಗಣಪತಿಯ ಮುಂದೆ ಲೋಕ ಕಲ್ಯಾಣಕ್ಕಾಗಿ ಕೊರೊನಾ ನಿಯಂತ್ರಣ ಮಾಡುವಂತೆ ಭಗವಂತನಲ್ಲಿ ಪ್ರಾರ್ಥನೆ ಮಾಡಿ ಮಹಾಯಾಗ ಮಾಡಲಾಯಿತು. ಬಳಿಕ ಸೋಮವಾರ ಸಂಜೆ ರಥದ ಬೀದಿಯಲ್ಲಿರುವ ಶ್ರೀ ಗುರುನಂಜಶೆಟ್ಟರ ಛತ್ರದ ಮುಂಭಾಗದಲ್ಲೇ ಸಾರ್ವಜನಿಕವಾಗಿ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಲಾಯಿತು.








