ನವದೆಹಲಿ: ಮಧ್ಯಪ್ರದೇಶದ ರಾಜಕೀಯ ಬಿಕ್ಕಟ್ಟು ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಭಿನ್ನಮತ ಸ್ಫೋಟಗೊಳ್ಳುವಂತೆ ಮಾಡಿದೆ. ಪಕ್ಷಕ್ಕೆ ಸಂಬಂಧಪಟ್ಟ ಅನೇಕ ವಿಷಯಗಳಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ನಾಯಕ ರಾಹುಲ್ ಗಾಂಧಿ ನಡುವೆಯೇ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಅದರಲ್ಲೂ ಕಾಂಗ್ರೆಸ್ ನಲ್ಲಿ ಸೋನಿಯಾ ಕ್ಯಾಂಪ್ ವರ್ಸಸ್ ರಾಹುಲ್ ಕ್ಯಾಂಪ್ ಎಂಬಂತಾಗಿರುವುದು ಪಕ್ಷಕ್ಕೆ ದೊಡ್ಡ ಕಳಂಕ ತಂದೊಡ್ಡಿದೆ.
ಮಧ್ಯಪ್ರದೇಶದ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್ ತೊರೆದಿರುವ ಬಗ್ಗೆ ಪಕ್ಷದ ಅನೇಕ ನಾಯಕರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಸಿಂಧಿಯಾ ಪಕ್ಷ ತೊರೆಯಲು ಸೋನಿಯಾ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕ ಉದಾಸೀನ ಮತ್ತು ತಾತ್ಸಾರವೇ ಕಾರಣ ಎಂದು ಯುವ ಮುಖಂಡರು ಆರೋಪಿಸಿದ್ದಾರೆ. ಅದರಲ್ಲೂ ಕಾಂಗ್ರೆಸ್ ಮುಖಂಡ ಸಂಜಯ್ ನಿರುಪಮ್ ಅವರು ಬಹಿರಂಗವಾಗಿಯೇ ಸೋನಿಯಾ ಗಾಂಧಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ಸದ್ಯ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಕಾಂಗ್ರೆಸ್ ನಲ್ಲಿ ಅಮ್ಮ-ಮಗನ ಕಿತ್ತಾಟ
ಎಸ್..! ದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷ ಕಾಂಗ್ರೆಸ್. ಆದ್ರೆ ಇದೀಗ ಸೂಕ್ತ ನಾಯಕತ್ವ ಇಲ್ಲದೇ ಪಕ್ಷ ಸೊರಗಿ ಹೋಗುತ್ತಿದೆ. ಇದಕ್ಕೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನಡುವಿನ ಮುಸುಕಿನ ಗುದ್ದಾಟವೇ ಕಾರಣ. ಕಾಂಗೆಸ್ ನಲ್ಲಿ ಈಗ ಸೋನಿಯಾ ಕ್ಯಾಂಪ್ ವರ್ಸಸ್ ರಾಹುಲ್ ಕ್ಯಾಂಪ್ ನಿರ್ಮಾಣವಾಗಿದೆ. ಹಿರಿಯ ರಾಜಕೀಯ ಧುರೀಣರು ಮತ್ತು ಹಳೆಯ ಕಾಂಗ್ರೆಸಿಗರು ಸೋನಿಯಾ ಪರ ನಿಷ್ಠೆ ಹೊಂದಿದ್ದರೆ, ಅತ್ತ ಯುವ ಮುಖಂಡರು ಮತ್ತು ಇತರ ಪ್ರಭಾವಿ ನಾಯಕರು ರಾಹುಲ್ ಪರ ನಿಂತಿದ್ದಾರೆ. ಇವರಲ್ಲಿಯೇ ನಾನಾ ಭಿನ್ನಾಭಿಪ್ರಾಯಗಳಿರುವುದು ಕಾಂಗ್ರೆಸ್ ನ ಈ ಸ್ಥಿತಿಗೆ ಕಾರಣ ಎನ್ನುವುದರಲ್ಲಿ ಸಂಶಯವಿಲ್ಲ.
ಯುವ ನಾಯಕರ ಪರ “ರಾಗಾ”!
ಕಾಂಗ್ರೆಸ್ ಯುವರಾಜನಂದೇ ಖ್ಯಾತಿ ಪಡೆದ ರಾಹುಲ್ ಗಾಂಧಿ, ಹಿರಿಯ ಮಾತಿಗಿಂತ ಯುವ ಮುಖಂಡರಿಗೆ ಬೆಲೆ ಕೊಡುತ್ತಿದ್ದಾರೆ. ಇದು ಪಕ್ಷದಲ್ಲಿರುವ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದ್ದು, ಇವರು ಸೋನಿಯಾ ಗಾಂಧಿ ಅವರ ಬಳಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಇತ್ತ ರಾಹುಲ್ ಗಾಂಧಿಯ ನಿರ್ಧಾರಗಳಿಗೆ ಪಕ್ಷದಲ್ಲಿ ಮನ್ನಣೆ ಸಿಗದೇ ಇರುವುದು ಮತ್ತು ಅವರ ನಾಯಕತ್ವವನ್ನು ಹಿರಿಯ ಕಾಂಗ್ರೆಸ್ಸಿಗರು ಒಪ್ಪಿಕೊಳ್ಳದ ಕಾರಣ ಪಕ್ಷದಿಂದ ರಾಹುಲ್ ಅಂತರ ಕಾಯ್ದುಕೊಳ್ಳಲು ಕಾರಣವಾಗಿದೆ. ಅಲ್ಲದೆ ಯುವ ಮುಖಂಡರ ಪರ ರಾಹುಲ್ ಬ್ಯಾಟ್ ಬೀಸುತ್ತಿದ್ದಾರೆ. ಇದಕ್ಕೆ ಸಂಜಯ್ ನಿರುಪಮ್ ಅವರ ಪರ ರಾಹುಲ್ ಗಾಂಧಿ ನೀಡಿದ ಹೇಳಿಕೆಯೇ ಸಾಕ್ಷಿಯಾಗಿದೆ. ಇದು ಸಹಜವಾಗಿಯೇ ಸೋನಿಯಾ ಗಾಂಧಿ ಅವರನ್ನು ಕೆರಳಿಸಿದೆ. ಇನ್ನೊಂದೆಡೆ ತಾಯಿ, ಮಗನ ನಡುವೆ ಪಕ್ಷದ ಸಂಘಟನೆ, ಮಹತ್ವದ ಹುದ್ದೆಗಳಿಗೆ ಸಮರ್ಥರ ನೇಮಕ ಮೊದಲಾದ ವಿಷಯಗಳಲ್ಲಿ ಉತ್ತರ-ದಕ್ಷಿಣ ಎಂಬ ಭಿನ್ನಾಭಿಪ್ರಾಯ ತಲೆದೋರಿರುವುದು ಈಗ ಮತ್ತಷ್ಟು ತೀವ್ರಗೊಂಡಿದೆ.
ಒಟ್ಟಾರೆ ಕಾಂಗ್ರೆಸ್ ನ ಆಂತರಿಕ ಕಲಹ ಈಗ ಬೀದಿಗೆ ಬಂದಂತಾಗಿದ್ದು, ಮುಂದಿನ ದಿನಗಳಲ್ಲಿ ಇದು ಪಕ್ಷದ ಮೇಲೆ ಯಾವ ಪರಿಣಾಮ ಬೀರುತ್ತೋ ಕಾದು ನೋಡಬೇಕಾಗಿದೆ.









