ಕೋಲಾರದಲ್ಲಿ ಬಡ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಣೆ
ಕೋಲಾರ : ಕೊರೊನಾ ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಬಡವರಿಗೆ ಕರ್ನಾಟಕ ಮಾದಿಗ ದಂಡೋರ ಕೋಲಾರ ಜಿಲ್ಲಾ ಪ್ರಚಾರ ಸಮಿತಿ ವತಿಯಿಂದ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗಿದೆ.
ರಾಜ್ಯದಲ್ಲಿ ಕೊರೊನಾ ಅಬ್ಬರಿಸಿಬೊಬ್ಬಿರಿಯುತ್ತಿದ್ದು, ಕೋಲಾರದಲ್ಲೂ
ಸಿಕ್ಕ ಸಿಕ್ಕ ದೇಹಹೊಕ್ಕುತ್ತಿದೆ. ಇದರ ಮಧ್ಯೆ ಕೊರೊನಾ ಲಾಕ್ ಡೌನ್ ನಿಂದಾಗಿ ಜನರು ತತ್ತರಿಸಿ ಹೋಗಿದ್ದು, ಕರ್ನಾಟಕ ಮಾದಿಗ ದಂಡೋರ ಕೋಲಾರ ಜಿಲ್ಲಾಪ್ರಚಾರ ಸಮಿತಿ ಬಡವರ ಹಸಿವು ನೀಗಿಸಲು ಮುಂದಾಗಿದೆ. ಕೋಲಾರ ಜಿಲ್ಲಾ ಪ್ರಚಾರ ಸಮಿತಿಯ ಅಧ್ಯಕ್ಷರಾದ ಜಿ. ಜಯಚಂದ್ರ ಅವರ ನೇತೃತ್ವದಲ್ಲಿ ಕೋಲಾರದ ಟಮಕ ಭಾಗದಲ್ಲಿ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಗುತ್ತಿದೆ. ಅಕ್ಕಿ, ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಸೇರಿದಂತೆ ಅನೇಕ ದಿನಸಿ ಪದಾರ್ಥಗಳನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.
ಆಹಾರ ಕಿಟ್ ವಿತರಣೆ ಮಾಡಿದ ಬಳಿಕ ಜಿ. ಜಯಚಂದ್ರ ಅವರು ಕೊರೊನಾ ವೈರಸ್ ಬಗ್ಗೆ ಜನರಿಗೆ ಅರಿವು ಮೂಡಿಸಿದರು.
ಬಳಿಕ ಮಾತನಾಡಿದ ಅವರು, ಕೊರೊನಾ ಲಾಕ್ ಡೌನ್ ಜನರ ಬದುಕನ್ನು ಕಿತ್ತುಕೊಂಡಿದೆ. ಕುಲ ಕಸಬನ್ನೇ ನಂಬಿಕೊಂಡು ಬದುಕುತ್ತಿದ್ದವರು ಈಗ ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿದ್ದಾರೆ. ಅದರಲ್ಲೂ ದಿನ ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದು, ಅಂಥವರ ಹಸಿವು ನೀಗಿಸಲು ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿಕೊಂಡರು.








