ದ.ಕ ಜಿಲ್ಲೆಯಲ್ಲಿ ಭಾನುವಾರ ಕೋವಿಡ್ ಪ್ರಕರಣ ವರದಿಯಾಗಿಲ್ಲ. 36 ಮಂದಿಯನ್ನು ತಪಾಸಣೆ ಮಾಡಲಾಗಿದ್ದು ಎನ್‌ಐಟಿಕೆಯಲ್ಲಿ 32, ಇಎಸ್‌ಐನಲ್ಲಿ 40 ಮಂದಿಯನ್ನು ಕ್ವಾರಂಟೈನ್ ಆಗಿ ಇರಿಸಲಾಗಿದೆ. ಭಾನುವಾರ ಬಂದಿರುವ ಎಲ್ಲ 190 ಸ್ಯಾಂಪಲ್ ವರದಿಗಳು ನೆಗೆಟಿವ್ ಆಗಿದ್ದು, 88 ಹೊಸ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 15 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿ ನಿಗಾ ಇರಿಸಲಾಗುತ್ತಿದೆ.
ಕಿತ್ತಳೆ ವಲಯದಲ್ಲೇ ಇದೆ ದ.ಕ
ಸತತವಾಗಿ ಕೋವಿಡ್ ಪ್ರಕರಣಗಳು ವರದಿಯಾಗುತ್ತಿರುವ ಹೊರತಾಗಿಯೂ ದ.ಕ ಜಿಲ್ಲೆ ಕಿತ್ತಳೆ ವಲಯದಲ್ಲೇ ಮುಂದುವರಿದಿದೆ. ರಾಜ್ಯ ಮಟ್ಟದ ಕೋವಿಡ್ ವಾರಿಯರ್ಸ್ ನೀಡಿರುವ ವರದಿ ಅನ್ವಯ ರಾಜ್ಯದಲ್ಲಿ ಹಿಂದೆ ಘೋಷಿಸಿರುವ ಮೂರೇ ಜಿಲ್ಲೆಗಳೇ ಇನ್ನೂ ಕೆಂಪು ವಲಯದಲ್ಲಿ ಮುಂದುವರಿದಿವೆ. ಉಳಿದಂತೆ ದ.ಕ ಕಿತ್ತಳೆಯಲ್ಲೇ ಇದ್ದರೆ ಉಡುಪಿಯೂ ಹಸಿರಾಗಿಯೇ ಇದೆ. ಜಿಲ್ಲೆಯಲ್ಲಿ ದೈನಂದಿನ ಕೋವಿಡ್ ಪ್ರಗತಿ ದರ ಕಳೆದ ವಾರ ಶೇ 3.7 ಇದ್ದುದು ಈ ವಾರ ಶೇ 2.6ಕ್ಕೆ ಇಳಿಕೆಯಾಗಿರುವುದು ಸಮಾಧಾನಕರ. ಇನ್ನು ಪ್ರಕರಣಗಳು ದ್ವಿಗುಣಗೊಳ್ಳಲು ಬೇಕಾಗುವ ದಿನಗಳ ಸಂಖ್ಯೆ ಕಳೆದವಾರ 14 ಇದ್ದುದು ಈ ವಾರ 16ಕ್ಕೆ ಏರಿರುವುದು ಕೂಡ ಇನ್ನೊಂದು ಗಮನಾರ್ಹ ಅಂಶ. ಜಿಲ್ಲೆಯಲ್ಲಿ ಕೋವಿಡ್ ಲಕ್ಷಣಗಳು ಇರುವ ರೋಗಿಗಳ ಸಂಖ್ಯೆ 25ರಲ್ಲಿ 7 ಮಾತ್ರ, ಉಳಿದ 18 ಮಂದಿಯೂ ರೋಗ ಲಕ್ಷಣಗಳಿಲ್ಲದೆಯೂ ಪಾಸಿಟಿವ್ ಆಗಿರುವವರು ಎನ್ನುವುದು ವಿಶೇಷ.








