ಬೆಂಗಳೂರು : ಎಲ್ಲರಿಗೂ ಒಳ್ಳೆಯದಾಗಲಿ, ಸಂಕಷ್ಟಗಲನ್ನು ದೂರವಾಗಿ ಕೆಲಸಗಳು ತೊಂದೆರೆಯಿಲ್ಲದೆ ನಡೆಯುವಂತೆ ಪ್ರಾರ್ಥಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮುಂದಾಳತ್ವದಲ್ಲಿ ಕಾಂಗ್ರೆಸ್ ಪಕ್ಷದ ನೂತನ ಕಚೇರಿಯ ಸಭಾಂಗಣದಲ್ಲಿ ಹೋಮ –ಹವನ ನಡೆಸಲಾಯಿತು.
ಗಣಪತಿ ಹೋಮ, ವಾಸ್ತು ಹೋಮ, ರಕ್ಷೋಜ್ಞ ಹೋಮ, ಭೂ ವರಹ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಅಷ್ಟ ಲಕ್ಷ್ಮಿ ಹೋಮ, ಗಾಯಿತ್ರಿ ಹೋಮವನ್ನು ಕೆಪಿಸಿಸಿ ಕಚೇರಿಯಲ್ಲಿ ನಡೆಸಲಾಗಿದೆ. ಜ್ಯೋತಿಷಿ ಡಾ. ನಾಗರಾಜ್ ಆರಾಧ್ಯ ಹಾಗೂ ಅರ್ಚಕ ಮಹಂತೇಶ್ ಭಟ್ ಪೂಜೆ ನೆರೆವೆರಿಸಿದರು.
ಲೋಕಕಲ್ಯಾಣಾರ್ಥವಾಗಿಯೂ ನಡೆದ ಪೂಜೆ-ಪುನಸ್ಕಾರಗಳ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಸಿದ್ದರಾಮಯ್ಯ, ಎಸ್. ಆರ್. ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಡಾ: ಜಿ. ಪರಮೇಶ್ವರ ಮತ್ತಿತರ ಮುಖಂಡರು ಹಾಗೂ ಸಮಸ್ತ ಕಾಂಗ್ರೆಸ್ ಕಾರ್ಯಕರ್ತರ ಹೆಸರಿನಲ್ಲಿ ಸಂಕಲ್ಪ ಮಾಡಲಾಗಿದೆ. ಕಚೇರಿ ಪೂಜಾ ಸಮಾರಂಭದ ಸಮಯದಲ್ಲಿ ಮಂಗಳಮುಖಿಯರು ಬಂದು ಡಿ.ಕೆ.ಶಿವಕುಮಾರ್ ನೀಡಿದ ಕಾಣಿಕೆಯನ್ನು ಸ್ವೀಕರಿಸಿದರು.
ಇದಾದ ಬಳಿಕ ಮಾತನಾಡಿದ ಡಿ.ಕೆ.ಶಿವಕುಮಾರ್, ಲೋಕಕಲ್ಯಾಣಾರ್ಥವಾಗಿ ಪೂಜೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಿಂದ ಕಟ್ಟಡ ಕಾಮಗಾರಿ ನಿಂತುಹೋಗಿತ್ತು. ಈಗ ಪೂರ್ಣಗೊಂಡಿದೆ. ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಒಳ್ಳೆಯದಾಗಲಿ ಎಂದು ಹೋಮ ಮಾಡಲಾಗಿದೆ. ಜೊತೆ ದೇಶ ಮತ್ತು ರಾಜ್ಯ ಕೊರೊನಾ ಮುಕ್ತವಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು








