ಮೈಸೂರು : ಕೊರೊನಾ ಲಾಕ್ ಡೌನ್ ಹಾಗೂ ವಿಶೇಷ ಪ್ಯಾಕೇಜ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ವಿರುದ್ಧ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಏನೇ ಯೋಜನೆ ಶುರು ಮಾಡಬೇಕು ಎಂದರೆ ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯನ ಕೇಳಿ ಮಾಡುವುದಕ್ಕೆ ಹೇಳುತ್ತೇನೆ ಎಂದು ವ್ಯಂಗ್ಯವಾಡಿದ್ದಾರೆ.
ಇಂದು ಮೈಸೂರಿನ ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, “ವಿರೋಧ ಪಕ್ಷದವರು ನರೇಂದ್ರ ಮೋದಿಯನ್ನು ಟೀಕೆ ಮಾಡುತ್ತಿದ್ದಾರೆ. ವಿಶ್ವದಲ್ಲೇ ಇಂದು ಎಲ್ಲರೂ ಮೋದಿಯವರನ್ನು ಮೆಚ್ಚುತ್ತಿದ್ದಾರೆ. ಭಾರತದವರು ಕೊರೊನಾ ವೈರಸ್ ಅನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಬೇಕಾಗಿಲ್ಲ” ಎಂದು ಕಾಂಗ್ರೆಸ್ ನಾಯಕರ ಟೀಕೆಗಳ ಬಗ್ಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.
ವಿರೋಧಪಕ್ಷದ ನಾಯಕರಾಗಿರೋದಕ್ಕೆ ಅಯೋಗ್ಯರು
ಇದೇ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ ಎಂಬ ಕೈ ನಾಯಕರ ಆರೋಪದ ಬಗ್ಗೆ ಮಾತನಾಡಿದ ಈಶ್ವರಪ್ಪ, ಮೊದಲು ನೂರು ದಿನಗಳು ಮಾತ್ರ ಇತ್ತು. ಈಗ 150 ದಿನ ಕಾರ್ಮಿಕರಿಗೆ ಕೆಲಸ ನೀಡಲಾಗುತ್ತಿದೆ. ಎಲ್ಲ ಸಮಯದಲ್ಲೂ ರಾಜಕಾರಣ ಮಾಡುವವರಿಗೆ ಇದು ಕಾಣೋದಿಲ್ಲ. ಅವರಿಗೆ ಟೀಕೆ ಮಾಡುವುದರಲ್ಲೇ ಆನಂದ ಕಂಡರೆ ಟೀಕೆ ಮಾಡಲಿ ನಮ್ಮದೇನು ಅಭ್ಯಂತರವಿಲ್ಲ. ಅವರು ನಿಜಕ್ಕೂ ವಿರೋಧಪಕ್ಷದ ನಾಯಕರಾಗಿರೋದಕ್ಕೆ ಅಯೋಗ್ಯರು. ಬಂದು ನೋಡಲಿ, ನಮ್ಮ ಜಿಲ್ಲೆಗಳಲ್ಲಿ ಏನು ಕೆಲಸಗಳು ಆಗುತ್ತಿವೆ ಅಂತ ಎಂದು ಗುಡುಗಿದರು.
ಟೀಕೆ ಮಾಡುವುದೇ ವಿಪಕ್ಷದ ಕೆಲಸ ಅಂದುಕೊಂಡಿದ್ದಾರೆ
ನಿನ್ನೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ನಾಯಕರ ಪ್ರತಿಭಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಪ್ರತಿಯೊಂದರಲ್ಲೂ ಟೀಕೆ ಮಾಡುವುದೇ ವಿರೋಧಪಕ್ಷದ ಕೆಲಸ ಅಂದುಕೊಂಡು ಬಿಟ್ಟಿದ್ದಾರೆ. ಅನುಮತಿ ಪಡೆಯದೆ ಕರ್ನಾಟಕ ರಾಜ್ಯದಲ್ಲೇ ಸಿದ್ದರಾಮಯ್ಯನವರು, ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಧರಣಿ ಆಯ್ತು. ಒಬ್ಬ ಮುಖ್ಯಮಂತ್ರಿಯಾಗಿದ್ದವರು, ಒಬ್ಬ ಕೆಪಿಸಿಸಿ ಅಧ್ಯಕ್ಷರಾಗಿದ್ದವರು ರಾಜ್ಯ ಸರ್ಕಾರದ ಅನುಮೋದನೆ ತೆಗೆದುಕೊಳ್ಳದೇ ವಿಧಾನಸೌಧದ ಒಳಗೆ ಪ್ರವೇಶಿಸಬಾರದು. ಗಾಂಧಿ ಪ್ರತಿಮೆ ಮುಂದೆ ಅನುಮತಿ ಇಲ್ಲದೆ ಧರಣಿ ನಡೆಸಬಾರದು. ಅಂದಾಗ ಅನುಮತಿ ಇಲ್ಲದೇ ಧರಣಿ ಮಾಡಬಾರದು ಅಂತ ತಿಳಿಯಲ್ವಾ? ಸಂವಿಧಾನದ ಬಗ್ಗೆ ಬೆಳಿಗ್ಗೆಯಿಂದ ಸಂಜೆ ತನಕ ಭಾಷಣ ಮಾಡ್ತಿರ್ತಾರೆ. ಯಾಕೆ ಧರಣಿ ಮಾಡಿದ್ದಾರೆ, ಅನುಮತಿ ತೆಗೆದುಕೊಂಡಿದ್ದರಾ ಎಂದು ಪ್ರಶ್ನೆ ಮಾಡಿದರು.








