ದಾವಣಗೆರೆ : ಜುಲೈ 2 ರಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮ ನಡೆಯುತ್ತದೆ. ಹಾಗಾಗಿ ಜುಲೈ 2 ರಂದು ಡಿ.ಕೆ. ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ಮೊದಲು ಅನುಮತಿ ನೀಡಿರಲಿಲ್ಲ. ಈಗ ಅನುಮತಿ ನೀಡಿದೆ. ಆದ್ದರಿಂದ ಜುಲೈ 2 ರಂದು ಡಿಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡುತ್ತಾರೆ ಎಂದು ಹೇಳಿದರು.
ಇದೆ ವೇಳೆ ಟಿಕೆಟ್ ವಿಚಾರದ ಬಗ್ಗೆ ಮಾತನಾಡಿದ ಅವರು, ಕಾಂಗ್ರೆಸ್ ರಾಷ್ಟ್ರೀಯ ಪಕ್ಷ, ಜೊತೆಗೆ ಹಿರಿಯ ನಾಯಕರು ಇದ್ದಾರೆ. ಆದ್ದರಿಂದ ಸಹಜವಾಗಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗಿರುತ್ತದೆ. ನಾವು ಯಾರ ಹೆಸರು ಶಿಫಾರಸ್ಸು ಮಾಡಿಲ್ಲ. ನಾಳೆ ಚರ್ಚೆ ಮಾಡಿ ಶಿಫಾರಸ್ಸು ಮಾಡುತ್ತೇವೆ ಎಂದು ಹೇಳಿದರು. ಜೊತೆಗೆ ಸಚಿವ ನಾರಾಯಣ ಗೌಡರ ಬೆಣ್ಣೆ ಹಚ್ಚುವ ಹೇಳಿಕೆಗೆ ತಿರುಗೇಟು ನೀಡಿದ ಅವರು, ನಾರಾಯಣ ಗೌಡರು ತುಂಬ ಆಸೆ, ಆಕಾಂಕ್ಷೆ ಇಟ್ಟಕೊಂಡು ಹೋಗಿದ್ದರು. ಆದರೆ ಸರ್ಕಾರದ ಬಳಿ ಹಣಯಿಲ್ಲ. ಆರ್ಥಿಕತೆ ಕುಸಿದಿದೆ. ಇದರಿಂದ ನಿರಾಸೆಯಾಗಿದೆ ಅವರಿಗೆ ಎಂದು ಹೇಳಿದರು.








