ಬೆಂಗಳೂರು : ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕವನ ವಾಚನ ಮೂಲಕ ಸರ್ಕಾರದ ಒಂದು ವರ್ಷದ ಸಾಧನೆಗಳ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂಗಿದೆ ಮಾತನಾಡಿದ ಅವರು, ಇಂದು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಒಂದು ವರ್ಷ ಪೂರೈಸಿದೆ. ಸಿಎಂ ಯಡಿಯೂರಪ್ಪ ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದಾರೆ.. ಆದರೆ ಈ ಸರ್ಕಾರದ್ದು ಒಂದನೇ ತಿಂಗಳು ಮಂತ್ರಿಮಂಡಲ ಇಲ್ಲದೆ ಬಿ.ಎಸ್. ಯಡಿಯೂರಪ್ಪ ತಿರುಗಾಟ. ಎರಡನೇ ತಿಂಗಳು ನೆರೆ ಪರಿಹಾರ ಕೊಡದೇ ನರಳಾಟ. ಮೂರನೇ ತಿಂಗಳು ಉಪಚುನಾವಣೆ ಎಂಬ ಬಯಲಾಟ, ನಾಲ್ಕನೇ ತಿಂಗಳು ಮಂತ್ರಿ ಮಂಡಲ ಎಂಬ ಕೂಗು. ಐದು, ಆರರಲ್ಲಿ ಮಂತ್ರಿಗಿರಿಗಾಗಿ ಕಿತ್ತಾಟ. ಏಳು, ಎಂಟನೇ ತಿಂಗಳಲ್ಲಿ ಕೊರೊನಾ ಲಾಕ್ ಡೌನ್ ಎಂಬ ಹೊರಳಾಟ.. ಒಂಭತ್ತ್ತು, ಹತ್ತು ತಿಂಗಳಲ್ಲಿ ಕೊರೊನಾ ಕೊರೊನಾ ಎಂಬ ಕಿರುಚಾಟ. ಹನ್ನೊಂದು, ಹನ್ನೆರಡನೇ ತಿಂಗಳು ಜನ ಸಾಮಾನ್ಯರಿಗೆ ಮಾತ್ರ ಸಾವು ಬದುಕಿನ ಆಟ. ಎಂದು ಟೀಕಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ಒಂದು ವರ್ಷ ತುಂಬಿದೆ. ಆಪರೇಷನ್ ನಡೆಸಿದ್ದೇವೆ ಅಂತ ಒಪ್ಪಿಕೊಳ್ಳಿ, ಮಾತು ಕೊಟ್ಟವರಿಗೆ ಮಂತ್ರಿಗಿರಿ ನೀಡಿದೆವು ಅಂತ ಹೇಳಿ. ಆದರೆ, ಸಾಧನೆ ಮಾಡಿದ್ದೇವೆ ಎಂದು ಮಾತ್ರ ಹೇಳಬೇಡಿ. ಇದು ಸೂತಕದಲ್ಲಿ ಸಂಭ್ರಮಾಚರಣೆ ಮಾಡುತ್ತಿರುವ ಸರ್ಕಾರ. ಈ ಸರ್ಕಾರ ತಿಂದಿದ್ದನ್ನು ಕಕ್ಕಿಸಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಟುವಾಗಿ ಟೀಕಿಸಿದ್ದಾರೆ.








