ಮಂಗಳೂರು, ಮೇ15 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಡೀಲಿನ ಆಸ್ಪತ್ರೆಯಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರಕಾರ ಸೋಂಕಿನ ಮೂಲ ಕಂಡು ಹಿಡಿಯಲು ಉನ್ನತ ಮಟ್ಟದ ತನಿಖೆಗೆ ಮುಂದಾಗಿದೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ತಜ್ಞರು ಸೋಂಕು ಎಲ್ಲಿಂದ ಶುರುವಾಗಿದೆ ಎಂಬ ತನಿಖೆ ನಡೆಸಲಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡಲು ಬಂಟ್ವಾಳದ ಮಹಿಳೆ ಮತ್ತು ಪಡೀಲಿನ ಫಸ್ಟ್ ನ್ಯೂರೋ ಆಸ್ಪತ್ರೆ ಕಾರಣವಾಗಿದ್ದು, ಇಲ್ಲಿಯವರೆಗೆ ಮಹಿಳೆಗೆ ಆಗಲಿ, ಆಸ್ಪತ್ರೆಯ ಸಂಪರ್ಕ ಕ್ಕೆ ಆಗಲಿ ಕೊರೊನಾ ಎಲ್ಲಿಂದ ಬಂದಿದೆ ಎನ್ನುವುದು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಆಸ್ಪತ್ರೆಯ ಸಂಪರ್ಕದಿಂದ ದ.ಕ. ದಲ್ಲಿ 19, ಉತ್ತರ ಕನ್ನಡದ ಭಟ್ಕಳದಲ್ಲಿ 21 ಮಂದಿಗೆ ಮತ್ತು ಉಡುಪಿ ಮೂಲದ ಇಬ್ಬರ ಸಹಿತ 42 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲಾಡಳಿತ ನೇತೃತ್ವದ ತಜ್ಞರ ತಂಡ ಫಸ್ಟ್ ನ್ಯೂರೋ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದ ಕೇರಳದ ರೋಗಿಗಳಿಂದ ಸೋಂಕು ಹರಡಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ. ಫೆಬ್ರವರಿ 1 ರಿಂದ ಎಪ್ರಿಲ್ 24 ರ ನಡುವೆ ಕೇರಳದಿಂದ ಒಟ್ಟು 1,606 ಹೊರರೋಗಿಗಳು ಮತ್ತು 612 ಮಂದಿ ಒಳರೋಗಿಗಳು ಚಿಕಿತ್ಸೆ ಪಡೆದು ತೆರಳಿದ್ದಾರೆ.
ಕೇರಳದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಗಳನ್ನು ತಪಾಸಣೆಗೆ ಒಳಪಡಿಸಿದರೆ ಫಸ್ಟ್ ನ್ಯೂರೋ ಆಸ್ಪತ್ರೆಯ ಕೊರೊನಾ ಸೋಂಕಿನ ಮೂಲ ಪತ್ತೆಯಾಗುವ ಸಂಭವವಿದ್ದು, ಇದಕ್ಕೆ ಕೇರಳ ಸರಕಾರ ಯಾವ ರೀತಿ ಸ್ಪಂದಿಸುತ್ತದೆ ಎಂದು ಕಾದು ನೋಡಬೇಕಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಇಲಾಖೆ ಕೇರಳ ಸರಕಾರಕ್ಕೆ ಈ ನಿಟ್ಟಿನಲ್ಲಿ ಪತ್ರ ಕೂಡ ಬರೆದಿದೆ ಎನ್ನಲಾಗಿದೆ.
ಈ ನಡುವೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಬೆಂಗಳೂರಿನಿಂದ ತನಿಖೆಗೆ ತಜ್ಞರ ತಂಡ ಆಗಮಿಸುತ್ತಿರುವ ವಿಚಾರದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.








