ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ನೈಸ್ (NICE) ಹಗರಣದ ಕಿಚ್ಚು ಈಗ ಅಗ್ನಿಪರ್ವತವಾಗಿ ಸ್ಫೋಟಗೊಂಡಿದೆ. ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಮತ್ತು ನೈಸ್ ಸಂಸ್ಥೆಯ ಮುಖ್ಯಸ್ಥ ಅಶೋಕ್ ಖೇಣಿ ಅವರ ವಿರುದ್ಧ ಆಘಾತಕಾರಿ ಆಡಿಯೋ ಬಾಂಬ್ ಒಂದನ್ನು ಬಿಡುಗಡೆ ಮಾಡಿದ್ದಾರೆ. ಈ ಆಡಿಯೋ ಸಂಭಾಷಣೆಯು ನೈಸ್ ಯೋಜನೆಯ ಹೆಸರಿನಲ್ಲಿ ನಡೆದಿರುವ ಕೋಟ್ಯಂತರ ರೂಪಾಯಿಗಳ ಲೂಟಿ ಮತ್ತು ಸರ್ಕಾರದ ಆಸ್ತಿಯ ಮೇಲಿನ ಹಕ್ಕನ್ನು ಹೇಗೆ ಬಿಟ್ಟುಕೊಡಲಾಗುತ್ತಿದೆ ಎಂಬುದನ್ನು ಬೆತ್ತಲೆ ಮಾಡಿದೆ.
ವಿಧಾನಸೌಧವನ್ನೇ ನನಗೆ ಬರೆದುಕೊಡಬೇಕಾಗುತ್ತೆ: ಅಶೋಕ್ ಖೇಣಿ
ಕುಮಾರಸ್ವಾಮಿ ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಅಶೋಕ್ ಖೇಣಿ ಅವರು ಮಾತನಾಡಿದ್ದಾರೆ ಎನ್ನಲಾದ ತುಣುಕುಗಳು ಸಂಚಲನ ಮೂಡಿಸಿವೆ. ನನಗೆ ಸರ್ಕಾರ 2 ಲಕ್ಷ ಕೋಟಿ ರೂಪಾಯಿ ಕೊಡಬೇಕಾಗುತ್ತೆ. ಈಗಿನ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ನೀಡಿ ದಿವಾಳಿಯಾಗಿದೆ. ಇನ್ನು ನನಗೆ ಎಲ್ಲಿಂದ ಹಣ ಕೊಡುತ್ತಾರೆ? ಒಂದು ವೇಳೆ ನಾನು ಕೋರ್ಟ್ ಮೆಟ್ಟಿಲೇರಿ ವ್ಯಾಜ್ಯ ಮುಂದುವರಿಸಿದರೆ, ಸರ್ಕಾರ ನನಗೆ ವಿಧಾನಸೌಧ ಅಥವಾ ವಿಕಾಸಸೌಧವನ್ನೇ ಬರೆದುಕೊಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಖೇಣಿ ಹೇಳಿರುವುದು ಆಡಿಯೋದಲ್ಲಿದೆ. ಇದು ಸರ್ಕಾರದ ಆಸ್ತಿಗಳನ್ನು ಖಾಸಗಿ ವ್ಯಕ್ತಿಗಳಿಗೆ ಧಾರೆ ಎರೆಯಲಾಗುತ್ತಿದೆಯೇ ಎಂಬ ಅನುಮಾನ ಹುಟ್ಟುಹಾಕಿದೆ.
ಟೇಲರ್ ಡಿಕೆ ಶಿವಕುಮಾರ್ ನಿಂದ ಫ್ರೇಮ್ ವರ್ಕ್ ಅಗ್ರಿಮೆಂಟ್ ಬದಲಾವಣೆ
ನೈಸ್ ಯೋಜನೆಯ ಮೂಲ ಸ್ವರೂಪವನ್ನೇ ಬದಲಾಯಿಸುವಲ್ಲಿ ಡಿ ಕೆ ಶಿವಕುಮಾರ್ ಅವರ ಪಾತ್ರ ದೊಡ್ಡದಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಅಪ್ಪನ ಬಟ್ಟೆಯನ್ನು ಮಗನಿಗೆ ಹೊಂದುವಂತೆ ಟೇಲರ್ ಮಾಡುವಂತೆ, ಡಿಕೆಶಿ ಅವರು ಫ್ರೇಮ್ ವರ್ಕ್ ಅಗ್ರಿಮೆಂಟ್ ಅನ್ನು ತಮಗೆ ಬೇಕಾದಂತೆ ಬದಲಿಸಿಕೊಂಡಿದ್ದಾರೆ. 2003ರಲ್ಲಿ ಕೇವಲ 4 ಕೋಟಿ ರೂಪಾಯಿ ಇದ್ದ ಇವರ ಆಸ್ತಿ ಇಂದು 1,413 ಕೋಟಿಗೆ ಏರಿದೆ ಎಂದರೆ ಅದು ಈ ಅಕ್ರಮಗಳ ಸಾಧನೆಯೇ ಹೊರತು ಬೇರೇನಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ನಾನು ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ನಿಮ್ಮ ಕುಟುಂಬವನ್ನು ಉಳಿಸಲು
ಕುಮಾರಸ್ವಾಮಿ ಅವರು ತಮ್ಮ ಸ್ವಂತ ಜಮೀನು ಉಳಿಸಿಕೊಳ್ಳಲು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಈ ಹಿಂದೆ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿದ ಹೆಚ್ ಡಿಕೆ, ಶಿವಕುಮಾರ್ ಅವರೇ ನಾನು ಬ್ಲ್ಯಾಕ್ ಮೇಲ್ ಮಾಡುತ್ತಿರುವುದು ನಿಜ. ಆದರೆ ಅದು ನನ್ನ ಆಸ್ತಿಗಲ್ಲ, ಬದಲಾಗಿ ನಿಮ್ಮ ತಮ್ಮ ಡಿ ಕೆ ಸುರೇಶ್, ನಿಮ್ಮ ತಾಯಿ ಗೌರಮ್ಮ ಮತ್ತು ನಿಮ್ಮ ಸಂಬಂಧಿಕರು ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ರಕ್ಷಿಸಲು ನೀವು ಮಾಡುತ್ತಿರುವ ಸಂಚನ್ನು ಬಯಲು ಮಾಡಲು ನಾನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದೇನೆ ಎಂದು ಗುಡುಗಿದ್ದಾರೆ. 1997ರಲ್ಲಿ ನೋಟಿಫೈ ಆದ ಸರ್ಕಾರದ ಭೂಮಿಯನ್ನು 2003ರಲ್ಲಿ ಡಿ ಕೆ ಸುರೇಶ್ ಅವರು 10 ಎಕರೆ ಖರೀದಿಸಿದ್ದಾರೆ. ಇದು ಅಕ್ರಮವಲ್ಲವೇ ಎಂದು ಅವರು ಪ್ರಶ್ನಿಸಿದ್ದಾರೆ.
ಕೆಐಎಡಿಬಿಗೆ ಸೇರಿದ ಭೂಮಿ ಮತ್ತು ಗೋಮಾಳದ ಜಮೀನುಗಳನ್ನು ಯಾರ ಯಾರ ಹೆಸರಿಗೋ ಬರೆಸಿಕೊಂಡು ಅಕ್ರಮ ಎಸಗಲಾಗಿದೆ. ಸುಮಾರು 300 ಎಕರೆ ಭೂಮಿಯನ್ನು ಕಬಳಿಸುವ ಹುನ್ನಾರ ನಡೆದಿದೆ. ಭೂಮಿ ಪರಿವರ್ತನೆಗೆ ಡಿ ಕೆ ಸುರೇಶ್ ಅರ್ಜಿ ಹಾಕಿದರೆ, ಅದರ ಪ್ರತಿ ಡಿ ಕೆ ಶಿವಕುಮಾರ್ ಕೈಗೆ ಸಿಗುತ್ತದೆ. 2011ರಲ್ಲಿ ಶೋಭಾ ಡೆವಲಪರ್ಸ್ ಜೊತೆ ಅಗ್ರಿಮೆಂಟ್ ಮಾಡಿಕೊಂಡು, ನೈಸ್ ಸಂಸ್ಥೆಯಿಂದ ಎನ್ ಓ ಸಿ ಪಡೆದಿದ್ದು ಹೇಗೆ? ಇಷ್ಟೆಲ್ಲಾ ಅಕ್ರಮಗಳನ್ನು ದಾಖಲೆ ಸಮೇತ ಬಿಡುಗಡೆ ಮಾಡುತ್ತಿದ್ದೇನೆ ಎಂದು ಕುಮಾರಸ್ವಾಮಿ ಸವಾಲು ಹಾಕಿದ್ದಾರೆ. ಈ ಆಡಿಯೋ ಬಾಂಬ್ ಈಗ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.








