ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೆಟ್ರೋ ಮಂದಿ ಭಯಭೀತಗೊಂಡಿದ್ದಾರೆ. ಜೊತೆಗೆ ಅನೇಕರು ನಗರ ಬಿಟ್ಟು ತಮ್ಮ ತಮ್ಮ ಊರುಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಈ ಬಗ್ಗೆ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿಲ್ಲ. ಕೊರೊನಾ ಕೈಮೀರಿಯೂ ಹೋಗಿಲ್ಲ. ಸೋಂಕಿತರ ಸಂಪರ್ಕಿತರು ಸೇರಿದಂತೆ ಕೊರೊನಾ ಪರೀಕ್ಷೆಯನ್ನು ಹೆಚ್ಚು ಮಾಡಿದ್ದೇವೆ. ಹೀಗಾಗಿ ಕೊರೊನಾ ಸೋಂಕಿನ ಸಂಖ್ಯೆ ಹೆಚ್ಚಾಗಿದೆ. ಇಷ್ಟಕ್ಕೆ ಬೆಂಗಳೂರು ಬಿಟ್ಟು ಜನರು ಹೋಗಬಾರದು. ಯಾವುದೇ ಕಾರಣಕ್ಕೂ ಹಳ್ಳಿಗೆ ಹೋಗಬೇಡಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಶ್ವಥ್ ನಾರಾಯಣ್, ಪ್ರತಿದಿನ 20 ಸಾವಿರ ಟೆಸ್ಟ್ ಮಾಡುತ್ತಿದ್ದೇವೆ. ಬೆಂಗಳೂರು ಬಿಟ್ಟು ಊರುಗಳಿಗೆ ಹೋಗ್ಬೇಡಿ. ಯಾವುದೇ ಕಾರಣಕ್ಕೂ ಹಳ್ಳಿಗೆ ಹೋಗಬೇಡಿ. ಕೊರೊನಾ ಬಗ್ಗೆ ಗಾಬರಿಯಾಗುವುದು ಬೇಡ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಸಂಖ್ಯೆ ಏರಿಕೆಯಾಗಿಲ್ಲ. ಬೆಂಗಳೂರಿನಲ್ಲೇ ಇರಿ. ಹಳ್ಳಿಗೆ ಹೋಗಬೇಡಿ ಎಂಬುದಾಗಿ ಜನರಲ್ಲಿ ಮನವಿ ಮಾಡಿದ್ದಾರೆ.








