ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೇಗೆ ನಿರ್ಧರಿಸುತ್ತಾರೆ ಗೊತ್ತಾ ?
ಜೂನ್ 2010 ರವರೆಗೆ, ಕೇಂದ್ರ ಸರ್ಕಾರವು ಪೆಟ್ರೋಲ್ ಬೆಲೆಯನ್ನು ನಿಗದಿಪಡಿಸುತ್ತಿತ್ತು ಮತ್ತು ಪ್ರತಿ 15 ದಿನಗಳಿಗೊಮ್ಮೆ ಬೆಲೆ ಬದಲಾಯಿಸುತ್ತಿತ್ತು.
26 ಜೂನ್ 2010 ರ ನಂತರ, ಸರ್ಕಾರವು ಪೆಟ್ರೋಲ್ ಬೆಲೆಯನ್ನು ನಿರ್ಧರಿಸಲು ತೈಲ ಕಂಪನಿಗಳಿಗೆ ಬಿಟ್ಟು ಕೊಟ್ಟಿತು. ಅದೇ ರೀತಿ 2014ರ ಅಕ್ಟೋಬರ್ ವರೆಗೆ ಡೀಸೆಲ್ ಬೆಲೆಯನ್ನೂ ಸರಕಾರವೇ ನಿಗದಿ ಮಾಡುತ್ತಿತ್ತು. ಆದರೆ 2014ರ ಅಕ್ಟೋಬರ್ 19ರಿಂದ ಸರಕಾರ ಈ ಕೆಲಸವನ್ನು ತೈಲ ಕಂಪನಿಗಳಿಗೆ ವಹಿಸಿತ್ತು.
ಪ್ರಸ್ತುತ, ತೈಲ ಕಂಪನಿಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ, ವಿನಿಮಯ ದರ, ತೆರಿಗೆ, ಪೆಟ್ರೋಲ್ ಮತ್ತು ಡೀಸೆಲ್ ಸಾಗಣೆ ವೆಚ್ಚ ಮತ್ತು ಇತರ ಹಲವು ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರ್ಧರಿಸುತ್ತವೆ.
ಕಚ್ಚಾ ತೈಲದ 85% ರಷ್ಟು ಆಮದು
ಭಾರತ 85% ಕ್ಕಿಂತ ಹೆಚ್ಚಿನ ಕಚ್ಚಾ ತೈಲವನ್ನ ಹೊರ ದೇಶಗಳಿಂದ ಸಂಗ್ರಹಿಸುತ್ತದೆ. ನಾವು ಅದಕ್ಕೆ ಡಾಲರ್ಗಳಲ್ಲಿ ಪಾವತಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಕಚ್ಚಾ ತೈಲದ ಬೆಲೆ ಏರಿಕೆ ಮತ್ತು ಡಾಲರ್ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ದುಬಾರಿಯಾಗುತ್ತದೆ. ಕಚ್ಚಾ ತೈಲವು ಬ್ಯಾರೆಲ್ಗಳಲ್ಲಿ ಬರುತ್ತದೆ. ಒಂದು ಬ್ಯಾರೆಲ್ ಎಂದರೆ 159 ಲೀಟರ್ ಕಚ್ಚಾ ತೈಲ.