ಗಾಂಧಿನಗರದ ಗಲ್ಲಾಪೆಟ್ಟಿಗೆಯಲ್ಲಿ 2025ನೇ ಇಸವಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ವರ್ಷ ಪೂರ್ತಿ ಸುಮಾರು 250ಕ್ಕೂ ಹೆಚ್ಚು ಕನ್ನಡ ಸಿನಿಮಾಗಳು ಬಿಡುಗಡೆಯಾಗಿವೆ. ಸೋಲು ಗೆಲುವಿನ ಲೆಕ್ಕಾಚಾರದ ನಡುವೆಯೂ, ಕೆಲವೇ ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ದೂಳೆಬ್ಬಿಸಿವೆ. ಸ್ಟಾರ್ ನಟರ ಅಬ್ಬರ ಹಾಗೂ ಕಥೆಯ ತಾಕತ್ತಿನಿಂದಾಗಿ ಈ ಬಾರಿ ಕನ್ನಡ ಚಿತ್ರರಂಗದ ಮಾರುಕಟ್ಟೆ ಸಾವಿರ ಕೋಟಿ ದಾಟಿದೆ ಎಂದರೆ ತಪ್ಪಾಗಲಾರದು.
ವಿಶೇಷವಾಗಿ ರಿಷಬ್ ಶೆಟ್ಟಿ ಅವರ ಕಾಂತಾರ ಚಾಪ್ಟರ್ 1 ಸಿನಿಮಾ ನಿರೀಕ್ಷೆಗೂ ಮೀರಿ ಕಲೆಕ್ಷನ್ ಮಾಡುವ ಮೂಲಕ ಭಾರತೀಯ ಚಿತ್ರರಂಗದ ದೃಷ್ಟಿ ಮತ್ತೊಮ್ಮೆ ಸ್ಯಾಂಡಲ್ ವುಡ್ ಕಡೆಗೆ ತಿರುಗುವಂತೆ ಮಾಡಿದೆ. ದೈವಿಕ ಕಥಾಹಂದರ ಹೊಂದಿರುವ ಈ ಚಿತ್ರ ಬರೋಬ್ಬರಿ 850 ಕೋಟಿಗೂ ಅಧಿಕ ಗಳಿಕೆ ಕಂಡು ಜೈಭೇರಿ ಬಾರಿಸಿದೆ. ಇನ್ನು ಪೌರಾಣಿಕ ಹಿನ್ನೆಲೆಯ ಮಹಾವತಾರ್ ನರಸಿಂಹ ಕೂಡ 300 ಕೋಟಿ ಕ್ಲಬ್ ಸೇರುವ ಮೂಲಕ ಪ್ರೇಕ್ಷಕರ ಮನಗೆದ್ದಿದೆ.
ಇತ್ತ ಸು ಫ್ರಮ್ ಸೋ ಸಿನಿಮಾ ಕೂಡ ಶತಕೋಟಿ ಸರದಾರನಾಗಿ ಹೊರಹೊಮ್ಮಿದರೆ, ದರ್ಶನ್ ಅಭಿನಯದ ದಿ ಡೆವಿಲ್ ಸಿನಿಮಾ ಇನ್ನೂ ಕೂಡ ಚಿತ್ರಮಂದಿರಗಳಲ್ಲಿ ಅಬ್ಬರಿಸುತ್ತಿದ್ದು ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಮುನ್ಸೂಚನೆ ನೀಡಿದೆ.
ಹಾಗಾದರೆ 2025ರಲ್ಲಿ ಅತಿ ಹೆಚ್ಚು ಹಣ ಗಳಿಸಿದ, ಪ್ರೇಕ್ಷಕರ ಜೇಬಿಗೆ ಕತ್ತರಿ ಹಾಕದೆ ಮನರಂಜನೆಯ ಮಹಾಪೂರವನ್ನೇ ಹರಿಸಿದ ಆ ಟಾಪ್ 10 ಸಿನಿಮಾಗಳು ಯಾವುವು? ಅವುಗಳ ಗಳಿಕೆ ಎಷ್ಟು? ಇಲ್ಲಿದೆ ನೋಡಿ ಸಿನಿ ರಿಪೋರ್ಟ್.
2025ರ ಟಾಪ್ 10 ಬ್ಲಾಕ್ ಬಸ್ಟರ್ ಸಿನಿಮಾಗಳು
1. ಕಾಂತಾರ ಚಾಪ್ಟರ್ 1
ಗಳಿಕೆ 852.25 ಕೋಟಿ ರೂಪಾಯಿ
2. ಮಹಾವತಾರ್ ನರಸಿಂಹ
ಗಳಿಕೆ 326.82 ಕೋಟಿ ರೂಪಾಯಿ
3. ಸು ಫ್ರಮ್ ಸೋ
ಗಳಿಕೆ 122.83 ಕೋಟಿ ರೂಪಾಯಿ
4. ದಿ ಡೆವಿಲ್
ಗಳಿಕೆ 26.85 ಕೋಟಿ ರೂಪಾಯಿ (ಪ್ರದರ್ಶನ ಮುಂದುವರಿದಿದೆ)
5. ಎಕ್ಕ
ಗಳಿಕೆ 11.39 ಕೋಟಿ ರೂಪಾಯಿ
6. ಮಾದೇವ
ಗಳಿಕೆ 7.4 ಕೋಟಿ ರೂಪಾಯಿ
7. ಛೂ ಮಂತರ್
ಗಳಿಕೆ 6.45 ಕೋಟಿ ರೂಪಾಯಿ
8. ಬ್ರ್ಯಾಟ್
ಗಳಿಕೆ 5.61 ಕೋಟಿ ರೂಪಾಯಿ
9. ಯುದ್ಧಕಾಂಡ ಚಾಪ್ಟರ್ 2
ಗಳಿಕೆ 5.54 ಕೋಟಿ ರೂಪಾಯಿ
10. ಏಳುಮಲೆ
ಗಳಿಕೆ 5.25 ಕೋಟಿ ರೂಪಾಯಿ
ಒಟ್ಟಾರೆಯಾಗಿ 2025 ನೇ ಸಾಲು ಕನ್ನಡ ಚಿತ್ರರಂಗಕ್ಕೆ ಸುವರ್ಣ ಅಧ್ಯಾಯವಾಗಿ ಪರಿಣಮಿಸಿದೆ. ಸಣ್ಣ ಮತ್ತು ಮಧ್ಯಮ ಬಜೆಟ್ ಸಿನಿಮಾಗಳು ಕಷ್ಟಪಟ್ಟರೂ, ಬಿಗ್ ಬಜೆಟ್ ಸಿನಿಮಾಗಳು ಮಾತ್ರ ನಿರ್ಮಾಪಕರ ಜೇಬು ತುಂಬಿಸುವಲ್ಲಿ ಯಶಸ್ವಿಯಾಗಿವೆ.








