ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರ ಹೇಗಿದೆ ಗೊತ್ತಾ?
ಅಯೋಧ್ಯೆ, ಅಗಸ್ಟ್ 5: ಶತಮಾನಗಳ ಸುದೀರ್ಘ ಕಾಯುವಿಕೆಯ ನಂತರ, ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಿದ್ಧವಾಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ನಿರ್ಮಾಣಕ್ಕೆ ಮೊದಲ ಇಟ್ಟಿಗೆಯನ್ನು ಇಡುವುದರ ಮೂಲಕ, ನೂರಾರು ವರ್ಷಗಳ ರಾಮ ಜನ್ಮಭೂಮಿಯ ಕರಾಳ ಇತಿಹಾಸಕ್ಕೆ ಕೊನೆಹಾಡಲಿದ್ದಾರೆ. ಅಯೋಧ್ಯೆಯ ಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆಗಳು ಮುಗಿದಿದ್ದು, ರಾಮ ಜನಿಸಿದ ಊರಿಗೆ ಅತಿಥಿಗಳ ಆಗಮನವೂ ಪ್ರಾರಂಭವಾಗಿದೆ. ಏತನ್ಮಧ್ಯೆ, ದೇವಾಲಯದ ನಿರ್ಮಾಣಕ್ಕಾಗಿ ಸ್ಥಾಪಿಸಲಾದ ಟ್ರಸ್ಟ್ ಭವ್ಯವಾದ ಮಂದಿರದ ಪ್ರಸ್ತಾವಿತ ಮಾದರಿಯ ಚಿತ್ರಗಳನ್ನು ಸಹ ಬಿಡುಗಡೆ ಮಾಡಿದೆ.
ದೇವಾಲಯದ ಈ ವಿನ್ಯಾಸವನ್ನು ವಾಸ್ತುಶಿಲ್ಪಿ ನಿಖಿಲ್ ಸೊಂಪೂರ ವಿನ್ಯಾಸಗೊಳಿಸಿದ್ದಾರೆ. ವಿಎಚ್‌ಪಿಯ ಹಳೆಯ ಮಾದರಿ ರಾಮಲಲ್ಲಾ ಮಂದಿರದ ವಿನ್ಯಾಸವನ್ನು ನಿಖಿಲ್ ತಂದೆ ಚಂದ್ರಕಾಂತ್ ಸೋಮಪುರ ಸಿದ್ಧಪಡಿಸಿದ್ದಾರೆ. ಈಗ ಹಳೆಯ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಮಂದಿರದ ಹೊಸ ಮಾದರಿಯು ಎತ್ತರ, ಗಾತ್ರ, ವಿಸ್ತೀರ್ಣ ಮತ್ತು ಮೂಲ ರಚನೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಹೊಂದಿದೆ.
ವಾಸ್ತುಶಿಲ್ಪಿ ಯೋಜನೆಯ ಪ್ರಕಾರ, ದೇವಾಲಯವನ್ನು ಸಿದ್ಧಗೊಳಿಸಲು ಮೂರರಿಂದ ಮೂರೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ಮಂದಿರವು ಮೂರು ಅಂತಸ್ತಿನದ್ದಾಗಿದ್ದು ವಾಸ್ತು ಶಾಸ್ತ್ರದ ಪ್ರಕಾರ ನಿರ್ಮಿಸಲಾಗುವುದು.
ಮಂದಿರದ ಶಿಖರದ ಎತ್ತರವನ್ನು 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ಗೋಪುರಗಳ ಸಂಖ್ಯೆಯನ್ನು ಮೂರರಿಂದ ಐದಕ್ಕೆ ಹೆಚ್ಚಿಸಲಾಗಿದೆ.
ರಾಮ ಮಂದಿರದ ಎತ್ತರವನ್ನು 33 ಅಡಿ ಹೆಚ್ಚಿಸಿರುವ ಕಾರಣದಿಂದಾಗಿ, ಮತ್ತೊಂದು ಮಹಡಿಯನ್ನು ಹೆಚ್ಚಿಸಬೇಕಾಗಿದೆ. ಮಂದಿರದ ಹಳೆಯ ಮಾದರಿಯ ಪ್ರಕಾರ, ದೇವಾಲಯದ ಉದ್ದ 268 ಅಡಿ 5 ಇಂಚುಗಳು. ಇದನ್ನು 280-300 ಅಡಿಗಳಿಗೆ ಹೆಚ್ಚಿಸಬಹುದು ಎಂದು ಹೇಳಲಾಗಿದೆ.
ದೇವಾಲಯವು ಐದು ಗೋಪುರಗಳನ್ನು ಹೊಂದಿರುತ್ತದೆ. ಹಿಂದಿನ ದೇವಾಲಯದ ಮಾದರಿಯು ಕೇವಲ ಎರಡು ಗೋಪುರಗಳನ್ನು ಹೊಂದಿತ್ತು ಆದರೆ ಹೊಸ ಮಾದರಿಯಲ್ಲಿ ಇದನ್ನು 5 ಕ್ಕೆ ಏರಿಸಿ ಮಂದಿರದ ಭವ್ಯತೆಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.
ರಾಮ ಮಂದಿರದ ಐದು ಗೋಪುರಗಳ ಕೆಳಭಾಗದಲ್ಲಿ ನಾಲ್ಕು ಭಾಗಗಳಿವೆ. ಇಲ್ಲಿ ಡ್ಯಾನ್ಸ್ ಪೆವಿಲಿಯನ್, ರಂಗ ಮಂಟಪ ತಯಾರಾಗಲಿದೆ. ಭಕ್ತರಿಗೆ ಸುತ್ತಲೂ ಕುಳಿತು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಕೂಡ ಸ್ಥಳವಿರುತ್ತದೆ.
ರಾಮ ಮಂದಿರದ ಪ್ರಸ್ತಾವಿತ ಮಾದರಿಯಲ್ಲಿ ಗೋಪುರದ ಭವ್ಯತೆಯನ್ನು ಹೆಚ್ಚಿಸಲಾಗಿದೆ.
ಮಂದಿರದ ಭವ್ಯತೆಯನ್ನು ಹೆಚ್ಚಿಸಲು, ಅದರ ನೆಲದ ವಿಸ್ತೀರ್ಣವನ್ನೂ ಹೆಚ್ಚಿಸಲಾಗಿದೆ. ಮಂದಿರದಲ್ಲಿನ ಕಲ್ಲುಗಳು ರಾಮ ದೇವಾಲಯದ ಕಾರ್ಯಾಗಾರದಲ್ಲಿ ಇರಿಸಿದಂತೆಯೇ ಇರುತ್ತದೆ. ದೆಹಲಿಯ ಕಂಪನಿ ಈ ಕಲ್ಲುಗಳನ್ನು ಸ್ವಚ್ಛ ಗೊಳಿಸುವ ಕೆಲಸವನ್ನು ಮಾಡುತ್ತಿದೆ.
ಮಣ್ಣಿನ ಪರೀಕ್ಷಾ ವರದಿಯ ಆಧಾರದ ಮೇಲೆ ದೇವಾಲಯದ ಅಡಿಪಾಯವನ್ನು ಉತ್ಖನನ ಮಾಡಲಾಗುತ್ತದೆ. ಇದು 20 ರಿಂದ 25 ಅಡಿ ಆಳವಿರಬಹುದು ಎಂದು ಹೇಳಲಾಗುತ್ತಿದೆ. ವೇದಿಕೆ ಎಷ್ಟು ಎತ್ತರವಾಗಲಿದೆ ಎಂಬುದನ್ನು ರಾಮ ಟೆಂಪಲ್ ಟ್ರಸ್ಟ್ ನಿರ್ಧರಿಸುತ್ತದೆ. ಇದೀಗ 12 ಅಡಿಗಳಿಂದ 14 ಅಡಿ ಎತ್ತರದ ಬಗ್ಗೆ ಚರ್ಚೆ ನಡೆಯುತ್ತಿದೆ.
ರಾಮ ಮಂದಿರದ ಹೊಸ ಮಾದರಿಯ ಪ್ರಕಾರ, ಇಡೀ ಮಂದಿರದಲ್ಲಿ ಒಟ್ಟು 318 ಸ್ತಂಭಗಳು ಇರಲಿವೆ. ಮಂದಿರದ ಪ್ರತಿ ಮಹಡಿಯಲ್ಲಿ 106 ಸ್ತಂಭಗಳನ್ನು ನಿರ್ಮಿಸಲಾಗುವುದು.
ರಾಮ ಮಂದಿರ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಮಪುರ ಅವರು ಮಂದಿರ ನಿರ್ಮಿಸಲು ಕನಿಷ್ಠ 100 ಕೋಟಿ ರೂ ಗಿಂತಲೂ ಹೆಚ್ಚಾಗಬಹುದು ಎಂದು ಹೇಳಿದ್ದಾರೆ. ನಿರ್ಮಾಣ ಅವಧಿಯನ್ನು ನಿಗದಿಪಡಿಸಿದರೆ, ಹೆಚ್ಚಿನ ಸಂಪನ್ಮೂಲಗಳು ಬೇಕಾಗುತ್ತವೆ. ಇದು ಬಜೆಟ್ ಅನ್ನು ಹೆಚ್ಚಿಸುತ್ತದೆ.
ರಾಮ ದೇವಾಲಯದ ವಿನ್ಯಾಸ ನಗರ ಶೈಲಿಯಲ್ಲಿದೆ. ಶಿಲ್ಪಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ. ಪ್ರತಿ ಲೆಕ್ಕಾಚಾರವು ತುಂಬಾ ವಿಶೇಷವಾಗಿದೆ ಎಂದು ವರದಿಯಾಗಿದೆ. ಉದಾಹರಣೆಗೆ, ಯಾವುದೇ ಆಯಾಮವು ಗರ್ಭಗುಡಿಗಿಂತ ದೊಡ್ಡದಾಗಿರಬಾರದು. ಅಲ್ಲದೆ, ಗರ್ಭಗೃಹ ಹೇಗೆ ಇರಬೇಕು ಎಂಬಂತಹ ವಿಷಯಗಳಿಗೆ ವಿಶೇಷ ಕಾಳಜಿ ವಹಿಸಲಾಗಿದೆ.
ಆಗಸ್ಟ್ 5 ರಂದು ಅಡಿಪಾಯದ ಮೊದಲ ಇಟ್ಟಿಗೆಯನ್ನು ಇಟ್ಟ ನಂತರ ಮಂದಿರ ನಿರ್ಮಾಣ ಪ್ರಾರಂಭವಾಗಲಿದೆ. ಮೂರೂವರೆ ವರ್ಷಗಳಲ್ಲಿ ಮಂದಿರ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಹೇಳಲಾಗುತ್ತಿದೆ ಮತ್ತು ರಾಮ ಭಕ್ತರು ಈ ಸಮಯ ಆದಷ್ಟು ಬೇಗ ಪೂರ್ಣಗೊಳ್ಳಲಿ ಎಂದು ಕಾಯುತ್ತಿದ್ದಾರೆ ಮತ್ತು ಮತ್ತೊಮ್ಮೆ ಭಗವಾನ್ ರಾಮನ ದರ್ಶನವು ಜನ್ಮಭೂಮಿ ದೇವಸ್ಥಾನದಲ್ಲಿ ಪ್ರಾರಂಭವಾಗಲಿ ಎಂದು ಆಶಿಸುತ್ತಿದ್ದಾರೆ.