ಬೆಂಗಳೂರು: ಕೊರೊನಾದಿಂದ ಗುಣಮುಖರಾಗಿರುವರು ಕೋವಿಡ್ ಸೋಂಕಿತರಿಗೆ ಪ್ಲಾಸ್ಮಾ ದಾನ ಮಾಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲಾ ವಲಯಗಳ ಬೂತ್ ಕಾರ್ಯಪಡೆಯ ನೋಡಲ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಮಾತನಾಡಿದ ಅವರು, ಪ್ಲಾಸ್ಮಾದಾನ ಮಾಡುವವರಿಗೆ ಸರ್ಕಾರದಿಂದ 5000 ರೂ. ಪೆÇ್ರೀತ್ಸಾಹಧನ ನೀಡಲಾಗುವುದು ಎಂದರು.

ರಾಜ್ಯದಲ್ಲಿ ಗುಣಮುಖರಾದವರ ಸಂಖ್ಯೆ ಹೆಚ್ಚಿದ್ದು 17,370 ಜನ ಈಗಾಗಲೇ ಗುಣಮುಖರಾಗಿದ್ದಾರೆ. ಐಸಿಯುನಲ್ಲಿ 597 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹವರ ಚಿಕಿತ್ಸೆಗೆ ಗುಣಮುಖರಾದವರ ಪ್ಲಾಸ್ಮಾ ಅತ್ಯಂತ ಪರಿಣಾಮಕಾರಿಯಾಗಿದ್ದು, ಪ್ಲಾಸ್ಮಾ ದಾನ ಮಾಡುವಂತೆ ಸಚಿವರು ಮನವಿ ಮಾಡಿದ್ದಾರೆ.
2 ದಿನಗಳಲ್ಲಿ ಬೆಂಗಳೂರಿನ ಎಲ್ಲಾ ವಲಯಗಳ ಬೂತ್ ಮಟ್ಟದ ಕಾರ್ಯಪಡೆ ರಚಿಸಲು ನಿರ್ದೇಶನ ನೀಡಿದ ಸಚಿವ ಸುಧಾಕರ್, ಸದಸ್ಯರ ಕರ್ತವ್ಯ ಮತ್ತು ನಿರ್ವಹಿಸಬೇಕಾದ ಕೆಲಸಗಳ ಕುರಿತು ಮಾರ್ಗಸೂಚಿ ನೀಡಿದ್ದಾರೆ.
ಲಾಕ್‍ಡೌನ್ ಅವಧಿಯಲ್ಲಿ ಮನೆ ಮನೆ ಸಮೀಕ್ಷೆ ನಡೆಸಿ 60 ವರ್ಷ ಮೇಲ್ಪಟ್ಟವರಿಗೆ ರಿವರ್ಸ್ ಐಸೋಲೇಶನ್ ಮಾಡಲು ಸೂಚನೆ ನೀಡಿದರು. ಹಾಸಿಗೆ ವ್ಯವಸ್ಥೆ, ಆಂಬುಲೆನ್ಸ್ ಒದಗಿಸುವುದು ಮುಂತಾದ ನಿರ್ಧಾರಗಳನ್ನು ಬೂತ್ ಮಟ್ಟದ ಕಾರ್ಯಪಡೆ ತೆಗೆದುಕೊಳ್ಳಿದೆ ಎಂದರು.
ಕೋವಿಡ್ ನಿರ್ವಹಣೆ ಮತ್ತು ನಿಗ್ರಹಕ್ಕೆ ಸರ್ಕಾರದ ಜೊತೆ ಕೈಜೋಡಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ ಸಚಿವರು, ಸಹಕಾರ ನೀಡುತ್ತಿರುವ ಸಂಘ ಸಂಸ್ಥೆಗಳಿಗೆ ಕೃತಜ್ಞತೆ ಸಲ್ಲಿಸಿದರು.
ರಾಜ್ಯದಲ್ಲಿ ಕೋವಿಡ್ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದ್ದು, ಇಂದಿಗೆ 9 ಲಕ್ಷ ಕೋವಿಡ್ ಟೆಸ್ಟ್ ಪೂರ್ಣಗೊಂಡಿವೆ. ಇಂದೇ 22,204 ಪರೀಕ್ಷೆ ನಡೆಸಲಾಗಿದೆ ಎಂದು ಸುಧಾಕರ್ ವಿವರ ನೀಡಿದ್ದಾರೆ.








