ಬೆಂಗಳೂರು : ಹಸಿವಿಗೆ ಜಾತಿ, ಧರ್ಮ, ಪಕ್ಷ ಮತ್ತು ಪಂಗಡ ಎಂಬುದು ಇರುವುದಿಲ್ಲ. ಹೀಗಾಗಿ ಹಸಿದವರನ್ನು ರಾಜಕೀಯದ ಕಣ್ಣುಗಳಿಂದ ನೋಡಬೇಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅಲ್ಲದೆ ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾಗಿರುವ ಕೂಲಿ, ಕಾರ್ಮಿಕರು, ವಲಸಿಗ ಕಾರ್ಮಿಕರು ಹಾಗೂ ಬಡವರಿಗೆ ಆಹಾರ ನೀಡುವ ವಿಚಾರದಲ್ಲಿ ತಾರತಮ್ಯ ಮಾಡಬೇಡಿ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇಂದು ಬಿಟಿಎಂ ವಿಧಾನಸಭೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಕ್ಷೇತ್ರದ ಶಾಸಕರೂ ಆಗಿರುವ ರಾಮಲಿಂಗಾರೆಡ್ಡಿ ಅವರು ಆರಂಭಿಸಿರುವ ಅನ್ನ ದಾಸೋಹ ಕೇಂದ್ರಕ್ಕೆ ಭೇಟಿ ನೀಡಿ ಅಡುಗೆ ತಯಾರಿ ವೀಕ್ಷಿಸಿದರು. ಕ್ಷೇತ್ರದ ವಿವಿಧ ಬಡಾವಣೆಗಳಿಗೆ ತೆರಳಿ ಜನರಿಗೆ ಆಹಾರದ ಪ್ಯಾಕೇಟ್ ಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮಾಧ್ಯಮಗಳ ಜೊತೆ ಮಾತನಾಡಿ ರಾಮಲಿಂಗಾರೆಡ್ಡಿ ಅವರ ಕಾರ್ಯವನ್ನು ಶ್ಲಾಘಿಸಿದರು. “ಬಿಟಿಎಂ ವಿಧಾನಸಭೆ ಕ್ಷೇತ್ರದಲ್ಲಿ ರಾಮಲಿಂಗಾರೆಡ್ಡಿ ಅವರು ದವಸ, ಧಾನ್ಯ, ಆಹಾರ, ತರಕಾರಿಯನ್ನು ಬಡವರು, ವಲಸಿಗ ಕಾರ್ಮಿಕರಿಗೆ ಲಾಕ್ ಡೌನ್ ಆದಾಗಿನಿಂದ ವಿತರಣೆ ಮಾಡುತ್ತಿದ್ದಾರೆ. 48 ಸಾವಿರ ಜನರಿಗೆ ನಿತ್ಯ ಅವರಿಂದಾಗಿ ಅನ್ನ ದಾಸೋಹ ನಡೆಯುತ್ತಿದೆ. ಅವರ ಈ ಕಾರ್ಯ ಶ್ಲಾಘನೀಯ. ಇದಕ್ಕಾಗಿ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು
ಇದೇ ವೇಳೆ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಸರ್ಕಾರ ಹಸಿದವರಿಗೆ ಆಹಾರದ ಪ್ಯಾಕೇಟ್ ನೀಡುವುದಾಗಿ ಹೇಳಿದೆ. ಆದರೆ ಕಾಂಗ್ರೆಸ್ ಶಾಸಕರ ಕ್ಷೇತ್ರಗಳಲ್ಲಿ ಸಮರ್ಪಕವಾಗಿ ವಿತರಣೆಯಾಗುತ್ತಿಲ್ಲ. ರಾಮಲಿಂಗಾರೆಡ್ಡಿಯವರು ಒತ್ತಡ ಹೇರಿದ ಕಾರಣಕ್ಕೆ ಅವರ ಕ್ಷೇತ್ರಕ್ಕಾಗಿ ಸರ್ಕಾರದ ಕಡೆಯಿಂದ ಕೇವಲ ಐದು ಸಾವಿರ ಪ್ಯಾಕೇಟ್ ಬರುತ್ತಿದೆ. ಈ ಭಾಗದಲ್ಲಿ ಕೂಲಿ, ಕಾರ್ಮಿಕರು, ವಲಸಿಗ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬೆಂಗಳೂರು ಒಂದರಲ್ಲೇ ಕಾರ್ಮಿಕರ ಸಂಖ್ಯೆ ಮೂರು ಲಕ್ಷ ಮೀರಿದೆ. ಆದರೆ ಸರ್ಕಾರ ಒಂದು ಲಕ್ಷ ಪ್ಯಾಕೇಟ್ ಪೂರೈಕೆ ಮಾಡುತ್ತಿದೆ. ಅದರಲ್ಲಿ 60 ಸಾವಿರ ಬಿಬಿಎಂಪಿ, 30 ಸಾವಿರ ಬೆಂಗಳೂರು ನಗರ ಜಿಲ್ಲಾಧಿಕಾರಿ, ಉಳಿದ 20 ಸಾವಿರ ಗ್ರಾಮೀಣ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಪೂರೈಕೆಯಾಗುತ್ತಿದೆ ಎಂದು ಹೇಳಿದರು.
ಇನ್ನು ಆಹಾರದ ಪ್ಯಾಕೇಟ್ ವಿತರಣೆಯಲ್ಲಿ ಪಕ್ಷಪಾತ, ತಾರತಮ್ಯ ನಡೆಯುತ್ತಿದೆ. ಅನೇಕ ಕಡೆಗಳಲ್ಲಿ ಬಿಜೆಪಿ ಕಾರ್ಪೊರೇಟರ್ ಗಳು ಅವರಿಗೆ ಬೇಕಾದವರಿಗೆ ಮಾತ್ರ ಆಹಾರ ನೀಡುತ್ತಿದ್ದಾರೆ ಎಂಬ ದೂರುಗಳಿವೆ. ಜೊತೆಗೆ ರಾಜ್ಯದ ನಾನಾ ಕಡೆಗಳಲ್ಲಿಯೂ ಇಂತಹ ವರ್ತನೆ ಕಂಡು ಬರುತ್ತಿದೆ. ಹಸಿವು ಎಲ್ಲರಿಗೂ ಒಂದೇ. ಸೋಂಕು ಜಾತಿ, ಧರ್ಮ ನೋಡಿಕೊಂಡು ಬರುವುದಿಲ್ಲ. ಎಲ್ಲ ಧರ್ಮದವರನ್ನೂ ಆವರಿಸಿಕೊಳ್ಳುತ್ತದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಹಸಿದ ಎಲ್ಲರಿಗೂ ಅನ್ನ ನೀಡುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.








