ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರತಿ ದಿನ ನಗರದಲ್ಲಿ ಸಾವಿರಕ್ಕೂ ಅಧಿಕ ಸೋಂಕು ಕೇಸ್ ಗಳು ಪತ್ತೆಯಾಗುತ್ತಿವೆ. ಇದರಿಂದ ಆತಂಕಗೊಂಡಿರುವ ಬೆಂಗಳೂರಿಗರು, ತಮ್ಮ ಸ್ವಂತ ಊರುಗಳತ್ತ ಪಯಣ ಬೆಳೆಸುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು, ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೂ ಕೂಡ ಬೆಂಗಳೂರು ಬಿಟ್ಟು ಹೋಗಬೇಡಿ. ನಾವು ಕೊರೊನಾ ಜೊತೆಯೇ ಬದುಕಬೇಕಿದೆ. ಸರ್ಕಾರ ಕೊರೊನಾ ತಡೆಗೆ ಎಲ್ಲ ಕ್ರಮ ಕೈಗೊಂಡಿದೆ ಎಂದು ಜನರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದರು.
ಬೆಂಗಳೂರಿನಲ್ಲಿ ಕೊರೊನಾ ತಡೆಗೆ ಎಲ್ಲ ಕ್ರಮ ತೆಗೆದುಕೊಂಡಿದ್ದೇವೆ. ಜನ ಗಾಬರಿಯಾಗುವ ಅಗತ್ಯ ಇಲ್ಲ. ಹೀಗಾಗಿ ಬೆಂಗಳೂರು ಬಿಡದೇ ಸರ್ಕಾರದ ಜೊತೆ ಸಹಕರಿಸಿ ಎಂದು ಮನವಿ ಮಾಡಿಕೊಂಡ ಬಿಎಸ್ ವೈ, ನಗರದಲ್ಲಿ 450 ಹೆಚ್ಚು ಅಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿದ್ದೇವೆ. ಇನ್ನು 10 ಸಾವಿರ ಬೆಡ್ ವ್ಯವಸ್ಥೆ ಕೂಡ ಮಾಡುತ್ತೇವೆ. ಈ ಮೂಲಕ ಬೆಂಗಳೂರಿನ ಮಹಾಜನತೆಗೆ ಯಾವುದಕ್ಕೂ ತೊಂದರೆ ಇಲ್ಲದಂತೆ ನೋಡಿಕೊಳ್ಳುತ್ತೇವೆ ಭರವಸೆ ನೀಡಿದ್ದಾರೆ.








