ಜೈಪುರ : ರಾಜಸ್ಥಾನ ರಾಜಕೀಯ ಬಿಕ್ಕಟ್ಟಿನ ಬಳಿಕ ಇಂದಿನಿಂದ ರಾಜಸ್ಥಾನ ವಿಧಾನಸಭೆ ಅಧಿವೇಶನ ಪ್ರಾರಂಭವಾಗಲಿದ್ದು, ಕಾಂಗ್ರೆಸ್ ವಿಶ್ವಾಸಮತ ನಿರ್ಣಯ ಮಂಡಿಸಲಿದೆ. ಈ ಹಿನ್ನೆಲೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಸಿದ್ದು, ತನ್ನ ಪಕ್ಷದ ಶಾಸಕರಿಗೆ ಕೆಲ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದೆ.
ಗುರುವಾರ ಬಿಜೆಪಿ ಶಾಸಕಾಂಗ ಸಭೆ ನಡೆಸಿದ್ದು, ಈ ವೇಳೆ ಪ್ರತಿಪಕ್ಷದ ನಾಯಕ ಗುಲಾಬ್‌ಚಂದ್ ಕಟಾರಿಯಾ ಮತ್ತು ಪ್ರತಿಪಕ್ಷದ ಉಪನಾಯಕ ರಾಜೇಂದ್ರ ರಾಥೋಡ್ ಅವರು ಶಾಸಕರಿಗೆ, ಕಾಂಗ್ರೆಸ್ ಶಾಸಕರೊಂದಿಗೆ ಕುಳಿತುಕೊಳ್ಳದಂತೆ ಸೂಚನೆ ನೀಡಿದ್ದಾರೆ. ಪಕ್ಷದ ಅನುಮತಿಯಿಲ್ಲದೇ ಯಾವುದೇ ಕಾರಣಕ್ಕೂ ಸದನದಿಂದ ಹೊರ ಹೋಗುವಂತಿಲ್ಲ ಎಂದು ಶಾಸಕರಿಗೆ ಸೂಚನೆ ನೀಡಲಾಗಿದೆ.








