ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ತಜ್ಞರ ಸಲಹಾ ಸಮಿತಿ ವರದಿ ಆಧಾರದ ಮೇಲೆ ಕೆಲವೆಡೆ ಲಾಕ್ ಡೌನ್ ಸಡಿಲಿಕೆಯಾಗಿದೆ. ಹಾಗಾಗಿ ಕೋವಿಡ್-19 ಸೋಂಕು ಹರಡಲು ಅವಕಾಶವಿಲ್ಲದಂತೆ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಬಗ್ಗೆ ಯಾವುದೇ ಆತಂಕ ಬೇಡ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆಯರಿಗೆ ವಿಶೇಷ ಸಂಭಾವನೆ ನೀಡಬೇಕು. ಸೂಕ್ತ ರಕ್ಷಣೆ ಒದಗಿಸಬೇಕು. ಹೊರನಾಡ ಕನ್ನಡಿಗರಿಗೆ ಅಗತ್ಯ ನೆರವು ಒದಗಿಸುವಂತೆ ಸಂಬಂಧಪಟ್ಟ ಮುಖ್ಯಮಂತ್ರಿಗಳೊಂದಿಗೆ ಮಾತನಾಡಬೇಕು. ಅನಿವಾಸಿ ಕನ್ನಡಿಗರ ನೆರವಿಗೆ ಸಹಾಯವಾಣಿ ತೆರೆಯುವಂತೆ ಮುಖ್ಯಮಂತ್ರಿಗಳಿಗೆ ಪಕ್ಷದ ವತಿಯಿಂದ ಸಲಹೆ ನೀಡಲಾಗಿದೆ. ಈ ಸಲಹೆಗಳಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.
ಇನ್ನು ಲಾಕ್ ಡೌನ್ ಅವಧಿಯಲ್ಲೂ ಕಾರ್ಯಕರ್ತರು ಸಾಕಷ್ಟು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಸಡಿಲಿಕೆ ಬಳಿಕವೂ ಸಾಮಾಜಿಕ ಅಂತರ ಹಾಗೂ ನೈರ್ಮಲ್ಯ ಕಾಪಾಡುವಲ್ಲಿ ನಮ್ಮ ಕಾರ್ಯಕರ್ತರು ನೆರವಾಗಲಿದ್ದಾರೆ ಎಂದರು.








