ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ : ಪ್ರಿಯಾಂಕ್ ಖರ್ಗೆ ಆಕ್ರೋಶ
ಕಲಬುರಗಿ : ಇಂದು ರಾಜ್ಯ ಸಚಿವ ಸಂಪುಟ ರಚನೆಯಾಗಿದ್ದು, ಸಂಪುಟದಲ್ಲಿ ಕಲಬುರಗಿ ಜಿಲ್ಲೆ ಕಡೆಗಣನೆ ಮಾಡಲಾಗಿದೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಸಚಿವ ಸಂಪುಟ ಬಗ್ಗೆ ಮಾತನಾಡಿದ ಪ್ರಿಯಾಂಕ್ ಖರ್ಗೆ, ಡಬಲ್ ಇಂಜಿನ್ ಸರ್ಕಾರದಿಂದ ಕಲ್ಯಾಣ ಕರ್ನಾಟಕದ ಕಂದಾಯ ವಿಭಾಗ ಕಲಬುರಗಿ ಜಿಲ್ಲೆಗೆ ಡಬಲ್ ದೋಖಾ ಆಗಿದೆ.
ಸಂಪುಟದಲ್ಲಿ ಕಲಬುರಗಿ ಜಿಲ್ಲೆ ಕಡಗಣನೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಪ್ರಾತಿನಿಧ್ಯ ನೀಡದೆ ಬಿಜೆಪಿ ಸರ್ಕಾರ ಮತ್ತೊಮ್ಮೆ ದೋಖಾ ಮಾಡಿದೆ.
ಈ ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಅದರಲ್ಲೂ ಕಲಬುರಗಿ ಜಿಲ್ಲೆಗೆ ಸಂಪುಟದಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸದೇ ಅನ್ಯಾಯವೆಸಗಿದ್ದರು.
ಈಗ ಅವರ ಉತ್ತರಾಧಿಕಾರಿ ಬೊಮ್ಮಾಯಿ ಅವರು ಕೂಡ ಮತ್ತೊಮ್ಮೆ ಈ ಪ್ರದೇಶವನ್ನು ಕಡೆಗಣನೆ ಮಾಡುವ ಮೂಲಕ ಅನ್ಯಾಯದ ಪರಂಪರೆ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಮುಂದುವರೆದು ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಎಂಟು ಸಚಿವರನ್ನು ಹೊಂದಿದ್ದ ಕಲಬುರಗಿ ಜಿಲ್ಲೆ ಈಗ ಒಬ್ಬರೇ ಒಬ್ಬ ಸಚಿವರನ್ನೂ ಹೊಂದದೆ ಅನಾಥವಾಗಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಿರ್ಲಕ್ಷ್ಯತನ ಮತ್ತು ಬಿಜೆಪಿ ಸಂಸದ ಶಾಸಕರ ಅಸಹಾಯಕತೆ ಕಾರಣವಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಗರಂ ಆದರು.